ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಳಿಕ ಈಗ ಅಣ್ಣ ಸೂರಜ್ ರೇವಣ್ಣಗೂ ಪುರುಷತ್ವ ಪರೀಕ್ಷೆಗೆ ಒಳಗಾಗಲಿದ್ದಾರೆ. ಪ್ರಜ್ವಲ್ ರೀತಿಯಲ್ಲೇ ಸೂರಜ್ ಗೂ ಪರೀಕ್ಷೆ ನಡೆಸಲು ಸಿಐಡಿ ಸಿದ್ಧತೆ ನಡೆಸಿದೆ.
ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದರು. ಅವರನ್ನು ಎಸ್ ಐಟಿ ತಂಡ ತನಿಖೆ ನಡೆಸಿದ್ದಲ್ಲದೆ, ಒಂದಕ್ಕಿಂತ ಹೆಚ್ಚು ಬಾರಿ ಪುರುಷತ್ವ ಪರೀಕ್ಷೆಗೊಳಪಡಿಸಿದ್ದರು. ಈ ಬಗ್ಗೆ ಸ್ವತಃ ಪ್ರಜ್ವಲ್ ಪದೇ ಪದೇ ಪುರುಷತ್ವ ಪರೀಕ್ಷೆಗೊಳಪಡಲು ಮುಜುಗರವಾಗುತ್ತದೆ ಎಂದು ನ್ಯಾಯಾಲಯದ ಮುಂದೆ ಹೇಳಿದ್ದರು.
ಇದೀಗ ಸೂರಜ್ ಕೂಡಾ ಪುರುಷತ್ವ ಪರೀಕ್ಷೆಗೊಳಪಡಲಿದ್ದಾರೆ. ಜೆಡಿಎಸ್ ಎಂಎಲ್ ಸಿಯಾಗಿರುವ ಸೂರಜ್ ಮೇಲೆ ಹೊಳೆನರಸೀಪುರದಲ್ಲಿ ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಬಂದಿದೆ. ಈ ಸಂಬಂಧ ಅವರನ್ನು ಬಂಧಿಸಿ ಸಿಐಡಿ ತನಿಖೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಮತ್ತೊಬ್ಬ ಯುವಕ ಸೂರಜ್ ಮೇಲೆ ದೌರ್ಜನ್ಯದ ಆರೋಪ ಮಾಡಿದ್ದಾನೆ.
ಹೀಗಾಗಿ ಈಗ ಸೂರಜ್ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ವಿಶೇಷವೆಂದರೆ ಪ್ರಜ್ವಲ್ ವಿಚಾರಣೆ ನಡೆಸಿದ ಅದೇ ಕಟ್ಟಡದಲ್ಲಿ ಸೂರಜ್ ತನಿಖೆ ನಡೆಸಲಾಗುತ್ತಿದೆ. ಎಸ್ ಐಟಿ ಕಚೇರಿಯಲ್ಲೇ ಸಿಐಡಿ ಅಧಿಕಾರಿಗಳು ಸೂರಜ್ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಅಣ್ಣ-ತಮ್ಮ ಒಂದೇ ಕಡೆ ವಿಚಾರಣೆ ಎದುರಿಸುತ್ತಿದ್ದಾರೆ.