ನವ ಕರ್ನಾಟಕದ ನಿರ್ಮಾಣಕ್ಕೆ ಮುಂದಾಗಿ: ಸಿಎಂ ಬೊಮ್ಮಾಯಿ

ಶುಕ್ರವಾರ, 13 ಮೇ 2022 (11:35 IST)
ಬೆಂಗಳೂರು: ನವ ಭಾರತಕ್ಕಾಗಿ ನವ ಕರ್ನಾಟಕದ ನಿರ್ಮಾಣದ ಧ್ಯೇಯವನ್ನು ಸಾಕಾರಗೊಳಿಸಲು ನಿರ್ಮಾಣ ಸಂಸ್ಥೆಗಳು ಸರ್ಕಾರದೊಂದಿಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
 
ಅವರು ಬೆಂಗಳೂರಿನಲ್ಲಿ ನಿರ್ಮಾಣ ವ್ಯಾಪಾರಗಳು ಮತ್ತು ನಿರ್ವಹಣೆ ಸಂಶೋಧನೆ ಅಭಿವೃದ್ಧಿ ಮತ್ತು ತರಬೇತಿಗಾಗಿನ ಸಂಸ್ಥೆ ಆಯೋಜಿಸಿರುವ ’ಸುರಂಗ ಮತ್ತು ಭೂಗತ ನಿರ್ಮಾಣ’ ಕುರಿತಾದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ‘ನಿರ್ಮಾಣ 2022’ಕ್ಕೆ ಚಾಲನೆ ನೀಡಿ ಮಾತನಾಡಿದರು.
 
ದೇಶದ ನಿರ್ಮಾಣ ಕಾರ್ಯಗಳಲ್ಲಿ ನಿರ್ಮಾಣ ಸಂಸ್ಥೆಗಳು ತಮ್ಮ ವೃತ್ತಿಪರತೆ, ನಿರ್ವಹಣಾ ಕೌಶಲಗಳೊಂದಿಗೆ ಸರ್ಕಾರದೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಭಾರತದ ಪ್ರಧಾನಮಂತ್ರಿಗಳ ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತದ ಆಶಯವನ್ನು ಸಾಕಾರಗೊಳಿಸಲು ಸರ್ಕಾರ ಮತ್ತು ಸಂಸ್ಥೆಗಳು ಒಟ್ಟಾಗಿ ಶ್ರಮಿಸಬೇಕು. ಗುಡ್ಡಪ್ರದೇಶಗಳು, ಹಾಗೂ ನಗರ ಪ್ರದೇಶಗಳಲ್ಲಿ ಭೂಗತ ಕಾಮಗಾರಿಗಳಲ್ಲಿ ಪರಿಣತಿಯೊಂದಿಗೆ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
 
ಸಾರ್ವಜನಿಕರ ಸುಲಲಿತ ಓಡಾಟಕ್ಕೆ ದಾರಿ ಮಾಡಿಕೊಡುವುದು ಸಾರ್ಥಕವಾದ ಕಾರ್ಯ. ಕರ್ನಾಟಕ ಆಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಡ್ಯಾಂ, ಸುರಂಗ, ವಿದ್ಯುತ್‌ ಯೋಜನೆಗಳನ್ನು ನಿರ್ಮಿಸಿ ನಮ್ಮ ಹಿರಿಯರು ಉತ್ತಮ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ರಾಜ್ಯದಲ್ಲಿ 1970ರಿಂದಲೂ ಬಹಳಷ್ಟುಸುರಂಗಗಳನ್ನು ನಿರ್ಮಿಸಲಾಗಿದೆ. ಜಲವಿದ್ಯುತ್‌ ಯೋಜನೆಗಳ ಸ್ಥಾಪನೆಗೆ ಸುರಂಗಗಳನ್ನು ಕೊರೆಯಲಾಗಿದೆ. ಮೆಟ್ರೋ ಕಾಮಗಾರಿಗಳಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದರು.
 
ನಗರ ಪ್ರದೇಶಗಳಲ್ಲಿ ಸುರಂಗಮಾರ್ಗ ನಿರ್ಮಿಸುವುದು ಸವಾಲಿನ ಕೆಲಸ. ಇಂತಹ ಸವಾಲುಗಳನ್ನು ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿದೆ. ಇಂತಹ ಕ್ಲಿಷ್ಟಕರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಂಜಿನಿಯರ್‌ ಹಾಗೂ ಭೂಗತ ನಿರ್ಮಾಣ ಕಂಪನಿಗಳನ್ನು ಅಭಿನಂದಿಸುತ್ತೇನೆ. ಇಲ್ಲಿ ಕಾರ್ಮಿಕರು ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಭೂಗತ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರು ದೇಶದ ಆಸ್ತಿಯಾಗಿದ್ದು, ಇವರ ಹಿತರಕ್ಷಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ