ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ

ಭಾನುವಾರ, 29 ಆಗಸ್ಟ್ 2021 (19:23 IST)
ಬೆಂಗಳೂರು: ಬಂಗಾಳ ಉಪಸಾಗರದ ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪ್ರಭಾವದಿಂದ ಆ.30ರಿಂದ ಸೆ.2ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಕಡೆ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ.
 
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಆ.30ರಂದು ಆರೆಂಜ್ ಅಲರ್ಟ್ ಹಾಗೂ ಆ.31ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. 
 
ಕಲಬುರ್ಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಆ.30 ಹಾಗೂ 31ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ  ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಾಂಶ 26 ಹಾಗೂ ಕನಿಷ್ಠ ಉಷ್ಣಾಾಂಶ 20 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
ನೈರುತ್ಯ ಮುಂಗಾರು ಭಾನುವಾರ ರಾಜ್ಯಾದ್ಯಂತ ಚುರುಕಾಗಿತ್ತು. ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಬುಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಿದೆ.
 
ಹಲವೆಡೆ ಭಾರಿ ಮಳೆ:
 
ಕೋಟದಲ್ಲಿ 11 ಸೆಂ.ಮೀ., ಕೊಪ್ಪಳದ ಬೇವೂರು, ಉಡುಪಿಯಲ್ಲಿ ತಲಾ 10 ಸೆಂ.ಮೀ., ದಕ್ಷಿಣ ಕನ್ನಡದ  ಬೆಳ್ತಂಗಡಿಯಲ್ಲಿ 9 ಸೆಂ.ಮೀ., ಮಣಿಯಲ್ಲಿ 8 ಸೆಂ.ಮೀ., ಉಡುಪಿಯ ಕೊಂಡಾಪುರ, ಸಿದ್ದಾಪುರ, ಬ್ರಹ್ಮಾವರ, ಕಾರ್ಕಳ, ಉತ್ತರ ಕನ್ನಡದ ಶಿರಾಲಿ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ತಲಾ 7 ಸೆಂ.ಮೀ., ಉಡುಪಿಯ ಕೊಲ್ಲೂರು, ಮಂಗಳೂರು, ಬಾಗಲಕೋಟೆ ಬಿಳಗಿ, ಶಿವಮೊಗ್ಗದ  ಆಗುಂಬೆ ತಲಾ 6 ಸೆಂ.ಮೀ., ದಕ್ಷಿಣ ಕನ್ನಡದ ಪಣಂಬೂರು, ಧರ್ಮಸ್ಥಳ, ಪುತ್ತೂರು, ಹೊನ್ನಾವರ, ಬಾಗಲಕೋಟೆಯ ಹುನಗುಂದ, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ದಾವಣಗೆರೆಯ ತೆಲಿಗಿಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ