ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ( Primary and High School ) 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವಂತ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ( Department of School Education ) ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶೈಕ್ಷಣಿಕ ಚಟುವಟಿಕೆಗಳ ಪಟ್ಟಿಯನ್ನು ಪ್ರಕಟಿಸಿದ್ದು, ರಾಜ್ಯದಲ್ಲಿ ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29ರಿಂದ ಪ್ರಾರಂಭವಾಗಿ, ಏಪ್ರಿಲ್ 10ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ಶೈಕ್ಷಣಿಕ ಸಾಲಿನಲ್ಲಿ 10 ತಿಂಗಳ ಕಾಲ ನಿರ್ವಹಣೆಯಲ್ಲಿದ್ದು, ಕನಿಷ್ಠ 220 ಶಾಲಾ ಕರ್ತವ್ಯದ ದಿನಗಳನ್ನು ನಿಗದಿ ಪಡಿಸಲಾಗಿದೆ. ವಿದ್ಯಾರ್ಥಿಗಳ ಪಠ್ಯ, ಪಠ್ಯೇತರ ಚಟುವಟಿಕೆಯನ್ನು ಈ ಶಾಲಾ ಕರ್ತವ್ಯದ ದಿನಗಳ ನಿಗಧಿತ ಅವಧಿಯಲ್ಲಿ ಹಂಚಿಕೆ ಮಾಡಲಾಗುತ್ತದೆ.
ಪ್ರಸ್ತುತ ಕೋವಿಡ್ ಪ್ರತಿಕೂಲ ಸನ್ನಿವೇಶದಿಂದಾಗಿ ಫ್ರೆಬ್ರವರಿ 2020ರಿಂದ ಶಾಲೆಗಳಿಗೆ ಅನಿವಾರ್ಯವಾಗಿ ರಜೆ ನೀಡುವ ಸಂದರ್ಭದಿಂದಾಗಿ 2019-220, 2020-21 ಮತ್ತು 2021-22ನೇ ಸಾಲಿನ ಶೈಕ್ಷಣಿಕ ಸಾಲುಗಳಲ್ಲಿ ಶಾಲೆಗಳು ಸ್ಥಗಿತಗೊಳಿಸಿ, ನಡೆದ ಕಾರಣ ಶೇ.50 ರಿಂದ 60ರಷ್ಟು ದಿನಗಳಲ್ಲಿ ಮಾತ್ರ ಭೌತಿಕವಾಗಿ ಶಾಲಾ ತರಗತಿಗಳು ನಡೆಸಲಾಗಿದೆ.
ಈ ಹಿನ್ನಲೆಯಲ್ಲಿ ಮುಂಬವರು ಶೈಕ್ಷಣಿಕ ವರ್ಷ 2022-23ರಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ 2021-22 ಅನ್ನು ದಿನಾಂಕ 09-04-2022ಕ್ಕೆ ಮುಕ್ತಾಯಗೊಳಿಸಲಾಗುತ್ತಿದೆ. 2021-22ನೇ ಸಾಲಿನ ಬೇಸಿಗೆ ರಜೆಯನ್ನು ದಿನಾಂಕ 10-04-2022 ರಿಂದ 15-05-2022ರವರೆಗೆ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷವನ್ನು ದಿನಾಂಕ 16-05-2022ರಿಂದ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.