ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಮುಂದಾಗಿದ್ರು: ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಆರ್‌ ಅಶೋಕ್‌ ಖಂಡನೆ

Sampriya

ಮಂಗಳವಾರ, 12 ನವೆಂಬರ್ 2024 (16:24 IST)
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು ಎಂದು ಸುಳ್ಳು ಹೇಳುವ ಮೂಲಕ ಮಾಜಿ ಶಾಸಕ, ಕಾಂಗ್ರೆಸ್‌  ನಾಯಕ ಅಜ್ಜಂಪೀರ್ ಖಾದ್ರಿ ಅಂಬೇಡ್ಕರ್ ಅವರಿಗೆ ಘೋರ ಅಪಮಾನ ಎಸಗಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆರ್‌ ಅಶೋಕ್ ಬರೆದುಕೊಂಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರರು ಇಸ್ಲಾಂ ಧರ್ಮ ಸ್ವೀಕರಿಸುವುದು ದೂರದ ಮಾತು. ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಇದ್ದ ಅಭಿಪ್ರಾಯ ಎಂಥದ್ದು ಎನ್ನುವುದನ್ನ ಕಾಂಗ್ರೆಸ್ ನಾಯಕರು ಒಮ್ಮೆ ಓದಿಕೊಳ್ಳಬೇಕು.

"ಇಸ್ಲಾಂ‌ಗೆ ತಲೆ ಎತ್ತುವ ಅವಕಾಶ ಸಿಕ್ಕಾಗಲೆಲ್ಲ ಇನ್ನೊಂದು ಸಂಸ್ಕೃತಿಯನ್ನು ನಾಶ ಮಾಡಿದೆ. ಇಸ್ಲಾಂ ಜೊತೆ ಒಂದು ದೇಶದೊಳಗೆ ನೆಮ್ಮದಿಯಾಗಿರಲು ಸಾಧ್ಯವಿಲ್ಲ" ಎಂದು ಇಸ್ಲಾಂ ಧರ್ಮದ ಗುಣವನ್ನ ಅಂಬೇಡ್ಕರ್ ಅವರು ಬಹಳ ಹಿಂದೆಯೇ ಸ್ಪಷ್ಟವಾಗಿ ಬಣ್ಣಿಸಿದ್ದಾರೆ.

"ಇಸ್ಲಾಂ, ಕ್ರೈಸ್ತ ಮತಕ್ಕೆ ಮತಾಂತರವಾದರೆ ಅದು ಕೇವಲ ಮತಾಂತರವಾಗದೆ ರಾಷ್ಟ್ರಾಂತರವಾಗಿ ಭಾರತದ ಏಕತೆಗೆ ಸಾರ್ವಭೌಮಕ್ಕೆ ಧಕ್ಕೆ ಆಗುತ್ತದೆ" ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು.

ಇಸ್ಲಾಂ ಧರ್ಮದ ಬಗ್ಗೆ ಇಂತಹ ಅಭಿಪ್ರಾಯ ಹೊಂದಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕರಿಸಲು ಮುಂದಾಗಿದ್ದರು ಎಂದರೆ ಅದನ್ನು ನಂಬಲು ಸಾಧ್ಯವೇ?

ಇಸ್ಲಾಂನ ಭ್ರಾತೃತ್ವ ಇಡೀ ಮನುಕುಲದ ಭ್ರಾತೃತ್ವವಾಗುವ ಬದಲು ಕೇವಲ ಮುಸಲ್ಮಾನರಿಗೆ ಸೀಮಿತವಾದದ್ದು ಎಂಬುದನ್ನು ಅರಿತೇ ಅಂಬೇಡ್ಕರ್‌ ಅವರು ಪಾಕಿಸ್ತಾನದ ರಚನೆಯನ್ನು ಸಮರ್ಥಿಸಿದ್ದರು. ಕಾಂಗ್ರೆಸ್ ಹಿಡಿತದಲ್ಲಿದ್ದ ಸ್ವಾತಂತ್ರ್ಯೋತ್ತರ ಭಾರತ ಪಾಕಿಸ್ತಾನವನ್ನೂ ಕಳೆದುಕೊಂಡಿತು, ಅಂಬೇಡ್ಕರ್‌ ಎಚ್ಚರಿಕೆಯನ್ನೂ ಧಿಕ್ಕರಿಸಿತು. ಪರಿಣಾಮ ಕಾಂಗ್ರೆಸ್ ಪಕ್ಷ ದೇಶದೊಳಗೆ ಸೆಕ್ಯುಲರಿಸಂ ಹೆಸರಿನಲ್ಲಿ ತುಷ್ಟೀಕರಣದ ನೀತಿಯನ್ನ ಇಂದಿಗೂ ಮುಂದುವರಿಸುತ್ತಲೇ ಬಂದಿದೆ.

ಒಂದು ಕಡೆ ಸಚಿವ ಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರ ಮೇಲೆ ಜನಾಂಗೀಯ ನಿಂದನೆ ಮಾಡುತ್ತಾರೆ. ಮತ್ತೊಂದು ಕಡೆ ಕಾಂಗ್ರೆಸ್ ಮಾಜಿ ಶಾಸಕರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚರಿತ್ರೆಯ ಬಗ್ಗೆ ಸುಳ್ಳು ಹೇಳುತ್ತಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಬಾಯಿ ಬಿಡದೆ ಜಾಣ ಕಿವುಡುತನ ಪ್ರದರ್ಶನ ಮಾಡುತ್ತಿರುವುದನ್ನ ನೋಡುತ್ತಿದ್ದರೆ ಈ ವಿವಾದಾತ್ಮಕ ಹೇಳಿಕೆಗಳೆಲ್ಲಾ ಅವರ ಸೂಚನೆಯ ಮೇರೆಗೆ ಹೂರಬರುತ್ತಿರುವಂತೆ ಕಾಣುತ್ತಿದೆ. ಒಂದು ಉಪಚುನಾವಣೆಗೋಸ್ಕರ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದು ರಾಜಕೀಯ ಮಾಡಬೇಕೆ?

ಜನಾಂಗೀಯ ನಿಂದನೆ ಮಾಡುವ ಸಂವಿಧಾನ ವಿರೋಧಿಗಳನ್ನ, ಅಂಬೇಡ್ಕರ್ ಅವರ ಚಾರಿತ್ರ್ಯ ಹರಣ ಮಾಡುವ ದ್ರೋಹಿಗಳನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ