ಸರ್ಕಾರದ ಆರ್ಥಿಕ ಸಹಾಯ ಪಡೆಯುತ್ತಿರುವ ಸಂಸ್ಥೆಯ ನೌಕರನೂ ಸರ್ಕಾರಿ ನೌಕರ?
ಗುರುವಾರ, 22 ಜುಲೈ 2021 (09:02 IST)
ಬೆಂಗಳೂರು (ಜು.22): ಸರ್ಕಾರದ ಅನುದಾನ ಪಡೆದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹಾಗೂ ನಾಗರಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರ ಎಂದು ಪರಿಗಣಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿಸಿ ಕಾಯ್ದೆ) ಅಡಿಯ ಅಪರಾಧ ಕೃತ್ಯಗಳ ಸಂಬಂಧ ಅಭಿಯೋಜನೆಗೆ ಗುರಿಪಡಿಸಬಹುದಾಗಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
•ಸರ್ಕಾರದ ಅನುದಾನ ಪಡೆದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವನೂ ಸರ್ಕಾರಿ ನೌಕರ
• ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯ ಅಪರಾಧ ಕೃತ್ಯಗಳ ಸಂಬಂಧ ಅಭಿಯೋಜನೆಗೆ ಗುರಿಪಡಿಸಬಹುದಾಗಿದೆ
ಸರ್ಕಾರದ ಮತ್ತು ಸರ್ಕಾರಿ ಪ್ರಾಧಿಕಾರಗಳ ನೌಕರರು ಮಾತ್ರ ಸರ್ಕಾರಿ ಉದ್ಯೋಗಿಗಳಾಗುತ್ತಾರೆ. ಭ್ರಷ್ಟಾಚಾರ ಆರೋಪದಡಿ ಕೇವಲ ಸರ್ಕಾರಿ ಉದ್ಯೋಗಿಗಳನ್ನು ಮಾತ್ರ ಅಭಿಯೋಜನೆಗೆ ಗುರಿಪಡಿಸಬಹುದು ಎಂಬ ವಾದವನ್ನು ಹೈಕೋರ್ಟ್ ಪ್ರಕರಣವೊಂದರಲ್ಲಿ ತಳ್ಳಿ ಹಾಕಿದೆ.
ಭ್ರಷ್ಟವ್ಯಕ್ತಿ ಕಾನೂನು ವ್ಯವಸ್ಥೆಯ ಲೋಪಗಳ ಪ್ರಯೋಜನ ಪಡೆದುಕೊಳ್ಳುತ್ತಾನೆ. ಅದೇ ಕಾರಣಕ್ಕೆ ಭ್ರಷ್ಟಾಚಾರ ಕಡಿಮೆ ಅಪಾಯದ ಹೆಚ್ಚು ಲಾಭದ ವ್ಯಾಪಾರವಾಗಿದೆ. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ತನ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು 2021ರ ಮಾ.8ರಂದು ದಾಖಲಿಸಿರುವ ಎಫ್ಐಆರ್ ಮತ್ತದರ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣೇಗೌಡ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರನ ಪರ ವಕೀಲರು, ಗೋಪಿನಾಥ್ ಮತ್ತು ವಿಜಯಪುರದ ಲೋಕಾಯುಕ್ತ ಪೊಲೀಸರ ವಿರುದ್ಧದ ಪ್ರಕರಣದಲ್ಲಿ ನಿರ್ಮಿತಿ ಕೇಂದ್ರದ ಉದ್ಯೋಗಿಯನ್ನು ಸರ್ಕಾರಿ ನೌಕರ ಎಂದು ಪರಿಗಣಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಆದೇಶಿಸಿದೆ. ಜತೆಗೆ, ಗೋಪಿನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರು ಪಿಸಿ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ. ನಿರ್ಮಿತಿ ಕೇಂದ್ರದ ನೌಕರರು ಸರ್ಕಾರಿ ನೌಕರರಲ್ಲ ಎಂದು ಈ ಹಿಂದೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶಿಸಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಅಲ್ಲದೆ, ನಿರ್ಮಿತಿ ಕೇಂದ್ರದ ಆಡಳಿತ ಮಂಡಳಿಯು ತನ್ನ ನೌಕರರನ್ನು ನೇಮಿಸುತ್ತದೆ. ಅವರು ಆ ಕೇಂದ್ರದ ಉದ್ಯೋಗಿಗಳಾಗಿರುತ್ತಾರೆ ಹೊರತು ಸರ್ಕಾರಿ ಉದ್ಯೋಗಿಗಳು ಎಂದು ಎನಿಸಿಕೊಳ್ಳುವುದಿಲ್ಲ. ಹೀಗಿದ್ದರೂ ಅರ್ಜಿದಾರನ ವಿರುದ್ಧ ಪಿಸಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಿರುವುದು ಕಾನೂನು ಬಾಹಿರ ಎಂದು ವಾದಿಸಿದ್ದ ಕೃಷ್ಣೇಗೌಡ ಪರ ವಕೀಲರು, ಎಸಿಬಿಯ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದರು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿಅವರ ನ್ಯಾಯಪೀಠ, ನಿರ್ಮಿತಿ ಕೇಂದ್ರವು ರಾಜ್ಯ ಸರ್ಕಾರದ ಸಿವಿಲ್ ನಿರ್ಮಾಣ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಕೇಂದ್ರ- ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ಹೇಳಬಹುದು. ಅರ್ಜಿದಾರ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಿದ್ದು, ಸಾರ್ವಜನಿಕ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಸಹಾಯ ಪಡೆಯುತ್ತಿರುವ ಸಂಸ್ಥೆಯ ಉದ್ಯೋಗಿಯು ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರೆ, ಆತನನ್ನು ಸರ್ಕಾರಿ ನೌಕರ ಎಂದು ಹೇಳಬಹುದು. ಕೇಂದ್ರ ಹಾಗೂ ಉದ್ಯೋಗಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಉತ್ತರಿಸಬೇಕಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಜತೆಗೆ, ಸರ್ಕಾರಿ ನೌಕರ ಅಥವಾ ನಾಗರಿಕ ಸೇವೆಯಲ್ಲಿರುವ ನೌಕರನು ಸರ್ಕಾರಿ ನೌಕರನೇ ಆಗಿರಬೇಕಿಲ್ಲ. ಆದರೆ, ಸರ್ಕಾರಿ ಅಥವಾ ನಾಗರಿಕ ಸೇವೆಯಲ್ಲಿರುವವವನು ಯಾವಾಗಲೂ ಸಾರ್ವಜನಿಕ ಸೇವಕನೇ ಆಗಿರುತ್ತಾನೆ. ಅರ್ಜಿದಾರನ ಕೆಲಸದ ಸ್ವರೂಪವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಸಾರ್ವಜನಿಕ ಕರ್ತವ್ಯ ಎಂಬ ಪದದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಆದ್ದರಿಂದ ಅರ್ಜಿದಾರನ ವಿರುದ್ಧ ಪಿಸಿ ಕಾಯ್ದೆಯಡಿಯ ಅಪರಾಧ ಪ್ರಕರಣಗಳಲ್ಲಿ ಅಭಿಯೋಜನೆಗೆ ಗುರಿಪಡಿಸಬಹುದಾಗಿದೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.
ಭ್ರಷ್ಟಾಚಾರವು ಎಲ್ಲರಿಗೂ ನೋವು ನೀಡುತ್ತದೆ. ಭ್ರಷ್ಟಾಚಾರ ಜನ ಸಾಮಾನ್ಯರಿಗೆ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಅಳಿಸಿ ಹಾಕುತ್ತದೆ, ಸಮಾಜದ ಆರ್ಥಿಕತೆ, ಮಾನವೀಯತೆ ಮತ್ತು ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಭ್ರಷ್ಟಾಚಾರ ವ್ಯವಸ್ಥೆಗೆ ಕಡಿವಾಣ ಹಾಕಿ, ದೇಶವನ್ನು ಭ್ರಷ್ಟಚಾರದಿಂದ ಮುಕ್ತಗೊಳಿಸುವತ್ತ ನಾವೆಲ್ಲರೂ ದೃಷ್ಟಿಹರಿಸಬೇಕಿದೆ