ಹೈದರಾಬಾದ್: ಬಾಲ್ಯ ವಿವಾಹದ ಪಿಡುಗಿನಿಂದ ತಪ್ಪಿಸಿಕೊಂಡಿದ್ದ ಆಂಧ್ರಪ್ರದೇಶದ ಬಾಲಕಿ ಇದೀಗ ಇಂಟರ್ ಮೀಡಿಯೇಟ್ ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾಳೆ.
ಆಂಧ‍್ರಪ್ರದೇಶದ ಕುರ್ನೂಲ್ ಜಿಲ್ಲೆಯ ಅದೋನಿ ಮಂಡಲದ ಪೆದ್ದಹರಿವನಂ ಗ್ರಾಮದ ನಿರ್ಮಲಾ ಎಂಬ ಬಾಲಕಿ ಆಂಧ‍್ರಪ್ರದೇಶದ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾಳೆ. ಈಕೆ 10 ನೇ ತರಗತಿಯಲ್ಲಿ 537 ಅಂಕ ಪಡೆದಿದ್ದಳು. ಆದರೆ ಹತ್ತನೇ ತರಗತಿ ಮುಗಿದ ಬಳಿಕ ಆಕೆಗೆ ಬಾಲ್ಯ ವಿವಾಹ ಮಾಡಿಸಲು ಮನೆಯವರು ಮುಂದಾಗಿದ್ದರು.
ಆದರೆ ಇದರ ವಿರುದ್ಧ ಸಿಡಿದು ನಿಂತ ನಿರ್ಮಲಾ ನನಗೆ ಮುಂದೆ ಐಪಿಎಸ್ ಆಗಬೇಕೆಂದು ಗುರಿ ಇಟ್ಟುಕೊಂಡು ಶಿಕ್ಷಣ ಮುಂದುವರಿಸಿದ್ದಳು. ಈಕೆಯ ತಂದೆ ಶ್ರೀನಿವಾಸ್ ಮತ್ತು ತಾಯಿ ಹನುಮಂತಮ್ಮ ಅವರ ನಾಲ್ವರು ಮಕ್ಕಳಲ್ಲಿ ಈಕೆ ಕಿರಿಯ ಮಗಳು.
ಮನೆಯಲ್ಲಿ ತೀವ್ರ ಬಡತನದಿಂದಾಗಿ ಉಳಿದೊಬ್ಬ ಮಗಳನ್ನು ಅಪ್ರಾಪ್ತ ವಯಸ್ಸಿಗೇ ಮದುವೆ ಮಾಡಲು ಪೋಷಕರು ತೀರ್ಮಾನಿಸಿದ್ದರು. ಆಕೆಗೆ ಅದೋನಿ ಶಾಸಕ ಸಾಯಿಪ್ರಸಾದ್ ರೆಡ್ಡಿ ಹಾಗೂ ಸ್ಥಳೀಯ ಅಧಿಕಾರಿಗಳು ಬೆಂಬಲವಾಗಿ ನಿಂತು ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ. ಇದೀಗ ಬಾಲ್ಯ ವಿವಾಹಕ್ಕೆ ಸೆಡ್ಡು ಹೊಡೆದು ಓದಿನಲ್ಲಿ ಗೆದ್ದು ಎಲ್ಲರಿಗೂ ಮಾದರಿಯಾಗಿದ್ದಾಳೆ.