ಶಿವಮೊಗ್ಗ : ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ರಾಜ್ಯದಲ್ಲಿ ರಾಷ್ಟ್ರದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ. 5 ಜನರ ವಿರುದ್ಧ ಟಿಳಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕೆಲವರು ಈ ರೀತಿಯ ಘೋಷಣೆಯೇ ಕೂಗಿಲ್ಲ ಎನ್ನುತ್ತಿದ್ದಾರೆ. ಘಟನೆಯ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿ ಕ್ಷೇತ್ರದಲ್ಲಿ ಆಯ್ಕೆಯಾದ ನೂತನ ಕಾಂಗ್ರೆಸ್ ಶಾಸಕ ಅಜೀಜ್ ಶೇಖ್ ಸಹ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇದನ್ನು ಅವರು ಒಪ್ಪಿಕೊಂಡಂತಾಗಿದೆ. ಭಟ್ಕಳದಲ್ಲಿಯೂ ಈ ರೀತಿ ನಡೆದಿದೆ. ಇದು ಒಳ್ಳೆಯದಲ್ಲ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯನವರ ನಡುವೆ ಜಾತಿ ಲಾಬಿ ನಡೆಯುತ್ತಿದೆ. ಡಿಕೆಶಿ ಪರ ಒಕ್ಕಲಿಗರು ಮತ್ತು ಸಿದ್ದರಾಮಯ್ಯನವರ ಪರ ಕುರುಬರ ಲಾಬಿ ನಡೆಯುತ್ತಿದೆ. ಇದು ನೇರವಾಗಿ ಜಾತಿವಾದಿಗಳು ಎಂದು ಒಪ್ಪಿಕೊಂಡಂತಾಗಿದೆ. ಬಿಜೆಪಿಗೆ ಇವರು ಕೋಮುವಾದಿಗಳು ಎನ್ನುತ್ತಿದ್ದರು. ಈಗ ಅವರು ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದರು.