ನಿವೇಶನ ಕೊಡಿಸೋದಾಗಿ ಕೋಟ್ಯಂತರ ಹಣ ವಂಚಿಸಿದ ಭೂಪ ಅರೆಸ್ಟ್
ನಿವೇಶನ ಕೊಡಿಸೋದಾಗಿ ಜನರಿಗೆ ಮಕ್ಮಲ್ ಟೋಪಿ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿದ ಪರಾರಿಯಾಗಿದ್ದ ಭೂಪನೊಬ್ಬ ಕೊನೆಗೆ ಅರೆಸ್ಟ್ ಆಗಿದ್ದಾನೆ.
ನಿವೇಶನ ಕೊಡಿಸುವುದಾಗಿ ಹೇಳಿ ಪೊಲೀಸರು ಸೇರಿದಂತೆ ಸುಮಾರು 40 ಕ್ಕೂ ಜನರಿಗೆ ವಂಚನೆ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ನಗರದ ಬಿ.ಎಲ್.ಗೌಡ ಬಡಾವಣೆಯ ಸಿದ್ದೇಶ್ ಬಂಧಿತ ಆರೋಪಿ. ಈತ ನಗರದ ಡಿಎಆರ್ ಪೊಲೀಸರು ಸೇರಿದಂತೆ ಸಾರ್ವಜನಿಕರಿಂದ ಹಣ ಪಡೆದು ಕಡಿಮೆ ದರದಲ್ಲಿ ಹಲವೆಡೆ ಬಡಾವಣೆ ನಿರ್ಮಿಸುತ್ತಿರುವುದಾಗಿ ಹೇಳಿದ್ದ. ನಿವೇಶನ ಕೊಡಿಸುವುದಾಗಿ ಹೇಳಿ 2014 ರಿಂದ ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿ ನಂತರ ಪರಾರಿಯಾಗಿದ್ದ.
ಸತೀಶ್ ಎಂಬುವವರು ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿ ಸಿದ್ದೇಶನನ್ನು ಬಂಧಿಸಿದ್ದಾರೆ.