ಬೆಂಗಳೂರು: 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹಾದಿ ಬೀದಿಯಲ್ಲಿ ಡಂಗೂರ ಸಾರಿ ಬಡವರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಅಕ್ಕಿಯೂ ಇಲ್ಲದೇ, ಹಣವೂ ಇಲ್ಲದೆ ಜನರ ಕೈಗೆ ದೊಡ್ಡ ಚೊಂಬು ಕೊಟ್ಟಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ 5ಕೆಜಿ ಅಕ್ಕಿಯ ಹಣ ಎರಡು ತಿಂಗಳಿನಿಂದ ಬಂದಿಲ್ಲ. ಅದಲ್ಲದೆ ಗೃಹಲಕ್ಷ್ಮೀ ಯೋಜನೆಯಡಿ ನೀಡುತ್ತಿದ್ದ 2ಸಾವಿರ ಕೂಡಾ ಎರಡು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಾಕಿಲ್ಲ.
ಈ ಸಂಬಂಧ ವಿಪಕ್ಷ ನಾಯಕ ಆರ್ ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹಾದಿ ಬೀದಿಯಲ್ಲಿ ಡಂಗೂರ ಸಾರಿ ಬಡವರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಅಕ್ಕಿಯೂ ಇಲ್ಲದೇ, ಹಣವೂ ಇಲ್ಲದೆ ಜನರ ಕೈಗೆ ದೊಡ್ಡ ಚೊಂಬು ಕೊಟ್ಟಿದೆ.
ಒಂದು ಕಡೆ ಮಹಿಳೆಯರಿಗೆ ಎರಡು ತಿಂಗಳಿಂದ ಗೃಹಲಕ್ಷ್ಮೀ ಹಣ ಕೊಡದೆ ಫಲಾನುಭವಿಗಳ ಸಂಖ್ಯೆ ಕಡಿತ ಮಾಡುವ ಸಂಚು ನಡೆಯುತ್ತಿದ್ದರೆ ಇನ್ನೊಂದು 60 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವ ಹುನ್ನಾರ ನಡೆಯುತ್ತಿದೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯನವರ ಎಡವಟ್ಟುಗಳಿಂದ ಗ್ಯಾರಂಟಿ ಯೋಜನೆಗಳಿಗೆ ಗ್ರಹಣ ಹಿಡಿದಿರುವುದಂತೂ ಸತ್ಯ.