ATM ಮಷಿನನ್ನೇ ಕತ್ತರಿಸಿದ ಕತರ್ನಾಕ್ ಕಳ್ಳರು...!

ಮಂಗಳವಾರ, 1 ನವೆಂಬರ್ 2016 (09:00 IST)
ಹುಬ್ಬಳ್ಳಿ: ಗ್ಯಾಸ್ ಕಟರ್ ನಿಂದ ಸ್ಟೇಟ್ ಬ್ಯಾಂಕ್ ಎಟಿಎಂ ಮಷಿನ್ ಕಟ್ ಮಾಡಿ, 17 ಲಕ್ಷ ರೂ. ದೋಚಿಕೊಂಡು ಪರಾರಿಯಾದ ಘಟನೆ ಹಳೇ ಹುಬ್ಬಳ್ಳಿ ಗುಡಿಹಾಳ ರೋಡನ ವಿಶಾಲ ನಗರ ಮಸೀದಿ ಬಳಿ ನಡೆದಿದೆ.
 

 
ಸೋಮವಾರ ತಡರಾತ್ರಿ ಎಸ್.ಬಿ.ಐ ಬ್ಯಾಂಕಿನ ಎಟಿಎಂ ಬಾಗಿಲು ಮುರಿದ ಕಳ್ಳರು, ಮೊದಲು ಅಲ್ಲಿರುವ ಸಿಸಿಟಿವಿ ಕೇಬಲ್ ಕಟ್ ಮಾಡಿದ್ದಾರೆ. ನಂತರ ಗ್ಯಾಸ್ ಕಟರ್ ಸಹಾಯದಿಂದ ಎಟಿಎಂ ಮಷಿನ್ ಕೆಳಭಾಗವನ್ನು ನಿಧಾನವಾಗಿ ಕಟ್ ಮಾಡಿ, ಅದರೊಳಗಿರುವ 17,93,400 ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ.
 
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಎಟಿಎಂ ಕಳ್ಳತನದ ಹಿಂದೆ ನುರಿತ ತಂಡದ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವು ಕಡೆ ಎಟಿಎಂಗಳನ್ನೇ ಕಳ್ಳತನ ಮಾಡಿ ಹಣವನ್ನು ದೋಚಿಕೊಂಡು ಹೋಗಿರುವ ತಂಡದ ಕೃತ್ಯವೇ ಇದಾಗಿರಬಹುದೆಂದು ಊಹಿಸಲಾಗಿದೆ.
 
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರಂಭದಲ್ಲಿ ದಾಖಲಾಗಿರುವ ಸಿಟಸಿಟಿವಿ ದೃಶ್ಯಾವಳಿ ಸಹಾಯದಿಂದ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ