ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಒಂದೇ ಗ್ರಾಮದ 50 ಮಂದಿ ವಿರುದ್ದ ಪೊಲೀಸರು ದೂರು ದಾಖಲಿಸಿರುವ ಘಟನೆ ನಡೆದಿದೆ. ನವೆಂಬರ್ 17ರಂದು ನಂಜನಗೂಡು ತಾಲೂಕಿನ ಜೆ.ಪಿ.ಹುಂಡಿ ಗ್ರಾಮದ ಬಳಿ ಕಾರು-ಬೈಕ್ ಡಿಕ್ಕಿಯಾಗಿ, ಬೈಕ್ ಸವಾರ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನ ಚಾಲಕನನ್ನು ಬಂಧಿಸಿ, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ, ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು.
ಈ ಸಂದರ್ಭದಲ್ಲಿ ಕೆಲವರು ನಂಜನಗೂಡು-ಹುಲ್ಲಹಳ್ಳಿ ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಅದಕ್ಕೆ ಅವಕಾಶ ಕೊಡದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೇದೆ ಕಿರಣ್, ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ, ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಎಂದು ಮನವಿ ಮಾಡಿದ್ದರು.
ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೇದೆ ಕಿರಣ್ ಮೇಲೆ ಹಲ್ಲೆ ನಡೆಸಿದ್ದರು. ಕಿರಣ್ ಘಟನೆಯಲ್ಲಿ ಭಾಗಿಯಾದ 50 ಮಂದಿಯ ವಿರುದ್ದ ದೂರು ದಾಖಲಿಸಿದ್ದರು. ಆಗ ಹಲ್ಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ 16 ಮಂದಿಯ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.