ಬೆಂಗಳೂರು: ರಾಜ್ಯ ಸರ್ಕಾರವು ಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡದೆ ಗೊಂದಲ ಸೃಷ್ಟಿಸಿಕೊಂಡು ಎಸ್‍ಸಿ. ಎಸ್‍ಟಿ ಹಾಗೂ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದೆ ಎಂದು ಮಾಜಿ ಸಚಿವರಾದ ಶ್ರೀ ಬಿ ಶ್ರೀರಾಮುಲು ಅವರು ಎಚ್ಚರಿಕೆ ನೀಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನೀಡಿದ ಭರವಸೆಗಳನ್ನು, ಆಶ್ವಾಸನೆಗಳನ್ನು ಜಾರಿ ಮಾಡಲಿಲ್ಲ. ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆ ಭರ್ತಿ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಇಷ್ಟು ಸಮಯವಾದರೂ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಸುಮಾರು 2.85 ಲಕ್ಷ ಹುದ್ದೆ ಖಾಲಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಉದ್ಯೋಗಕ್ಕಾಗಿ ಇಂದು ಯುವಕರು ಬೀದಿಗಿಳಿದು ಹೋರಾಟ ಮಾಡ್ತಾ ಇದ್ದಾರೆ. ಅವರ ನೋವನ್ನು ಸರ್ಕಾರ ಆಲಿಸಲಿಲ್ಲ. ದಪ್ಪ ಚರ್ಮದ ಸರ್ಕಾರಕ್ಕೆ ಯುವಕರು ಪ್ರತಿಭಟನೆ ನಡೆಸಿ ಬಾರುಕೋಲಿನಿಂದ ಹೊಡೆದ ಮೇಲೆ ಐವತ್ತು ಸಾವಿರ ಹುದ್ದೆ ಭರ್ತಿಗೆ ಮುಂದಾಗಿದೆ. ಇಷ್ಟು ದಿನ ಯಾಕೆ ನೇಮಕಾತಿ ನಡೆಸಲಿಲ್ಲ ಎಂದು ಕೇಳಿದರೆ ಮೀಸಲಾತಿ ಸಮಸ್ಯೆ ಎಂದು ಸರ್ಕಾರ ಹೇಳಿತ್ತು ಎಂದರು.
ಮೀಸಲಾತಿ ಎಂಬುದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಹಕ್ಕು. ಅವರು ಎಸ್‍ಸಿ., ಎಸ್‍ಟಿ ಹಾಗೂ ಹಿಂದುಳಿದ ವರ್ಗಕ್ಕೆ ಶೇ 50 ಮೀಸಲು ನೀಡಿದ್ರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎಂದು ತೀರ್ಮಾನ ಮಾಡಿದ್ದೆವು ಎಂದು ವಿವರಿಸಿದರು.
ಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಾ ಇದೆ. ಈ ಸರ್ಕಾರ ಮಾನವೀಯತೆಯಿಂದ ಉದ್ಯೋಗಕಾಂಕ್ಷಿಗಳ ಬೇಡಿಕೆಯನ್ನು ಪರಿಗಣಿಸಲಿಲ್ಲ. ಈಗ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಬಂದಿದೆ. ಆದ್ದರಿಂದ 50 ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಈಗ ಬಂದಿರುವುದು ತಾತ್ಕಾಲಿಕ ತಡೆ. ಇದಕ್ಕೆ ಏಕೆ ಹೆದರುತ್ತೀರಿ ಎಂದು ಪ್ರಶ್ನಿಸಿದರು.
ಮೀಸಲಾತಿಯನ್ನು ಸರಿಯಾಗಿ ಅನುಷ್ಠಾನ ಮಾಡದೆ ಯುವಕರಿಗೆ ಮಹಾದ್ರೋಹವನ್ನು ಈಗಿನ ಸರ್ಕಾರ ಮಾಡುತ್ತಿದೆ. ಅಂಬೇಡ್ಕರ್ ನೀಡಿದ್ದನ್ನೇ ಕಾಂಗ್ರೆಸ್ ಕಸಿಯುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಬಿಜೆಪಿಯ ಎಲ್ಲಾ ಸಂಸದರು, ಶಾಸಕರು, ಮಾಜಿ ಸಚಿವರು ಈ ಕುರಿತು ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಈ ಸರ್ಕಾರ ಎಸ್‍ಸಿಪಿ ಹಾಗೂ ಟಿಎಸ್‍ಪಿ ಹಣವನ್ನೂ ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಅನ್ಯಾಯ ಮಾಡಿದೆ. ಈಗ ಮೀಸಲಾತಿಯಲ್ಲೂ ಸರಿಯಾದ ಸ್ಪಷ್ಟತೆ ನೀಡದೆ ಗೊಂದಲ ಸೃಷ್ಟಿಸಿದೆ. ಅಂಬೇಡ್ಕರ್ ಅವರು ನೀಡಿದ ಅವಕಾಶವನ್ನೇ ಕಸಿಯುತ್ತಿರುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವ ವಿಷಯವಲ್ಲ. ಅನ್ಯಾಯವನ್ನು ಖಂಡಿಸಿ ಜನರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.