ಪುತ್ರನಿಗೆ ಶಾಲೆಯಲ್ಲಿ ಅಡ್ಮಿಶನ್‌‌ಗೆ ನಿರಾಕರಿಸಿದ್ದರಿಂದ ತಂದೆ ಸಜೀವ ದಹನ

ಬುಧವಾರ, 6 ಡಿಸೆಂಬರ್ 2017 (19:55 IST)
ಪುತ್ರನಿಗೆ ಶಾಲೆಯಲ್ಲಿ  ಪ್ರವೇಶ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ತಂದೆಯೊಬ್ಬ ತನ್ನನ್ನು ತಾನೇ ಸಜೀವವಾಗಿ ದಹಿಸಿಕೊಂಡು ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. 
ಮಾರತ್‌ಹಳ್ಳಿಯಲ್ಲಿರುವ ಸಾಫ್ಟ್‌ವೇರ್ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ 35 ವರ್ಷ ವಯಸ್ಸಿನ ಎರಡು ಮಕ್ಕಳ ತಂದೆಯಾದ ರಿತೇಶ್ ಕುಮಾರ್, ಪುತ್ರನಿಗೆ ಶಾಲೆಯಲ್ಲಿ ಪ್ರವೇಶ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ನೊಂದು ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಂಡಿದ್ದರು. ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.   
 
ಆದಿತ್ಯ ಬಜಾಜ್ ಎನ್ನುವ ಏಜೆಂಟ್‌ನೊಬ್ಬ ರಿತೇಶ್ ಕುಮಾರ್‌ನಿಂದ 1.25 ಲಕ್ಷ ರೂಪಾಯಿಗಳನ್ನು ಪಡೆದು, ಪುತ್ರನಿಗೆ ಶಾಲೆಯಲ್ಲಿ ಸೀಟು ಕೊಡಿಸುವುದಾಗಿ ವಂಚಿಸಿದ್ದರಿಂದಲೇ ರಿತೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
 
ಟ್ಯೂಶನ್ ಸೆಂಟರ್‌ ನಡೆಸುತ್ತಿರುವ ಏಜೆಂಟ್ ಆದಿತ್ಯ ಬಜಾಜ್, ರಿತೇಶ್ ಕುಮಾರ್‌ನಿಗೆ 6 ಲಕ್ಷ ರೂಪಾಯಿಗಳನ್ನು ನೀಡಿದಲ್ಲಿ ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಅಢ್ಮಿಶನ್ ಕೊಡಿಸುವುದಾಗಿ ಹೇಳಿದ್ದ. ಇದನ್ನು ನಂಬಿದ ಕುಮಾರ್ ಆತನಿಗೆ ಮುಂಗಡವಾಗಿ 2.5 ಲಕ್ಷ ರೂಪಾಯಿ ನೀಡಿದ್ದ. ಆದರೆ, ಅಡ್ಮಿಶನ್ ದೊರೆಯದಿರುವ ಹಿನ್ನೆಲೆಯಲ್ಲಿ ಹಣ ನೀಡುವಂತೆ ಕುಮಾರ್ ಆದಿತ್ಯನಿಗೆ ಒತ್ತಾಯಿಸಿದ್ದ. ತದನಂತರ ಆದಿತ್ಯ ಕುಮಾರನಿಗೆ 1.25 ಲಕ್ಷ ರೂಪಾಯಿಗಳನ್ನು ಮರಳಿಸಿ ಉಳಿದ ಹಣವನ್ನು 10 ದಿನಗಳೊಳಗಾಗಿ ಮರಳಿಸುವುದಾಗಿ ತಿಳಿಸಿದ್ದ ಎನ್ನಲಾಗಿದೆ. 
 
ಆದಿತ್ಯ ಬಜಾಜ್ ಧೂರ್ತತನವನ್ನು ಕಂಡ ರಿತೇಶ್ ಕುಮಾರ್ ಎರಡು ಬಾಟಲಿಯಲ್ಲಿ ಪೆಟ್ರೋಲ್ ತೆಗೆದುಕೊಂಡು ಆತನ ಕಚೇರಿಗೆ ತೆರಳಿ ಉಳಿದ ಹಣವನ್ನು ನೀಡದಿದ್ದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಸಿದ್ದಾನೆ. ನಂತರ ಕಡ್ಡಿಪೆಟ್ಟಿಗೆ ಗೀರಿದಾಗ ಕೂಡಲೇ ಬೆಂಕಿ ಹೊತ್ತುಕೊಂಡಿದೆ.
 
ರಿತೇಶ್ ಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಆರೋಪಿ ಆದಿತ್ಯ ಬಜಾಜ್ ಹಲವಾರು ಪೋಷಕರಿಗೆ ವಂಚಿಸಿರುವ ಮಾಹಿತಿಗಳು ಬಂದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದಿತ್ಯನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ