ಬೆಂಗಳೂರು: ಪೂರ್ವ ಅರಬ್ಬೀಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಇದರ ಪ್ರಭಾವದಿಂದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಿಣ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ಜುಲೈ 23ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜುಲೈ 20ರಂದು ಯೆಲ್ಲೋ ಅಲರ್ಟ್, ಜುಲೈ 21, 22 ಹಾಗೂ 23 ರಂದು ಆರೆಂಜ್ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಕೆಲವೆಡೆ ಗುಡುಗಿನಿಂದ ಕೂಡಿದ ಭಾರಿ ಹಾಗೂ ಅತಿಭಾರಿ ಮಳೆ ನಿರೀಕ್ಷಿಸಲಾಗಿದೆ. ಜುಲೈ 20, 21 ಹಾಗೂ 22ರಂದು ಯೆಲ್ಲೋ ಅಲರ್ಟ್, ಜುಲೈ 23ರಂದು ಆರೆಂಜ್ ಅಲರ್ಟ್ ಕೊಡಲಾಗಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜುಲೈ 22 ಮತ್ತು 23ರಂದು ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ನಿರ್ದೆಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಹಲವೆಡೆ ವ್ಯಾಪಕ ಮಳೆ:
ನೈರುತ್ಯ ಮುಂಗಾರು ಸೋಮವಾರ ದಕ್ಷಿಣ ಒಳನಾಡಿನಲ್ಲಿ ತೀವ್ರವಾಗಿತ್ತು. ಉತ್ತರ ಒಳನಾಡಿನಲ್ಲಿ ಸಕ್ರೀಯ ಹಾಗೂ ಕರಾವಳಿಯಲ್ಲಿ ಸಾಮಾನ್ಯವಾಗಿದ್ದು, ಹಲವೆಡೆ ವ್ಯಾಪಕ ಮಳೆಯಾಗಿದೆ. ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 10 ಸೆಂ.ಮೀ, ಉತ್ತರ ಕನ್ನಡದ ಭಟ್ಕಳ, ಕಲಬುರ್ಗಿಯ ಗುಂಡಗುರ್ತಿಯಲ್ಲಿ ತಲಾ 9 ಸೆಂ.ಮೀ, ಶಿವಮೊಗ್ಗದ ಹುಂಚದಕಟ್ಟೆ, ಅಗ್ರಹಾರ, ಕೋಣಂದೂರು, ಅರಸಾಳು, ಉಡುಪಿಯ ಕೊಲ್ಲೂರಿನಲ್ಲಿ ತಲಾ 8 ಸೆಂ.ಮೀ, ಶಿರಾಲಿ, ಕೋಟದಲ್ಲಿ ತಲಾ 7 ಸೆಂ.ಮೀ, ಉತ್ತರ ಕನ್ನಡದ ಮಂಕಿ, ಹೊನ್ನಾವರ, ಯದಗಿರಿಯ ಭೀಮಾರಾಯನಗುಡಿ, ಕವಡಿಮಟ್ಟಿ, ಕಲಬುರ್ಗಿಯ ಸೇಡಂ, ತೀರ್ಥಹಳ್ಳಿ, ಭಾಗಮಂಡಲ, ದಾವಣಗೆರೆಯ ಹರಪನಹಳ್ಳಿಯಲ್ಲಿ ತಲಾ 6 ಸೆಂ.ಮೀ. ಎಂದು ಮಾಹಿತಿ ನೀಡಿದ್ದಾರೆ.