ಗೋಲ್ಡ್ ಫಿಂಚ್ ಹೋಟೆಲ್‍ನಲ್ಲಿ ಇಂದು ಪ್ರಮುಖರ ಸಭೆ ನಡೆಯಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೇ ಮಾಡಬಹುದು. ಅದು ಸ್ಯಾಂಪಲ್ ಮೂಲಕ ನಡೆಸುವ ಸರ್ವೇ; ಇವರು ಒಂದೂವರೆ ಕೋಟಿ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾದ ಕ್ರಮ ಎಂದರು.
ಇಲ್ಲದೇ ಇರುವ ಜಾತಿಗಳನ್ನು ಸೇರಿಸಿ ಜಾತಿ- ಜಾತಿಗಳ ನಡುವೆ ಸಂಘರ್ಷ ಉಂಟು ಮಾಡಿ, ಅದರಲ್ಲಿ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ ಎಂದು ದೂರಿದರು. ಸಿದ್ದರಾಮಯ್ಯ ಅವರು ಕಾಂತರಾಜು ಕಮಿಟಿ ಮಾಡಿದ್ದೇಕೆ? ಎಂದು ಕೇಳಿದರು. ಆ ವರದಿ ಏನಿದೆ ಎಂದು ಬಹಿರಂಗಪಡಿಸಬೇಕು. ಅದನ್ನು ತಿರಸ್ಕರಿಸಿದ್ದೇಕೆ, ಅದರಲ್ಲಿದ್ದ ಲೋಪಗಳೇನು ಎಂದು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಈಗಿನ ಸರ್ವೇ ಕಾನೂನುಪ್ರಕಾರ ಇದೆಯೇ? ಹಿಂದಿನ ಲೋಪವನ್ನು ಸರಿಪಡಿಸಲಾಗಿದೆಯೇ? ಎಂದು ಕೇಳಿದರು. ಧರ್ಮದ ಕಾಲಂನಲ್ಲಿ ಇತರರು, ನಾಸ್ತಿಕರನ್ನೂ ಸೇರಿಸುತ್ತಿದ್ದಾರೆ. ಯಾಕೆ ಈ ಗೊಂದಲ ಸೃಷ್ಟಿ ಮಾಡುತ್ತೀರಿ ಎಂದು ಕೇಳಿದರು. ನಾಸ್ತಿಕರಿಗೆ ದೇವರು, ಧರ್ಮ ಇಲ್ಲ; ಮತ್ಯಾಕೆ ನಾಸ್ತಿಕರನ್ನು ಸೇರಿಸುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.