ಬಿಬಿಎಂಪಿ ಆಯುಕ್ತರಿಂದ ರಸ್ತೆ ಕಾಮಗಾರಿ ತಪಾಸಣೆ

ಶನಿವಾರ, 7 ಆಗಸ್ಟ್ 2021 (20:59 IST)
ನಗರದ ಹಲಸೂರು ವಾರ್ಡ್-90 ವ್ಯಾಪ್ತಿಯ ತಿರುವಳ್ಳುವರ್ ಪ್ರತಿಮೆ ವೃತ್ತ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿರುವ ಪರಿಣಾಮ ಇಂದು ಮುಖ್ಯ ಆಯುಕ್ತ ಗೌರವ್ ಗುಪ್ತ ರವರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ರಸ್ತೆ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಬೇಕು. ಈ ಪೈಕಿ ಇರುವ ಸಣ್ಣ ನೀರುಗಾಲುವೆಯಲ್ಲಿ ಹೂಳನ್ನು ತೆರವು ಮಾಡಿ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸೈಡ್ ಡ್ರೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಮಳೆಯಾದರೆ ರಸ್ತೆ ಮಾರ್ಗದಲ್ಲಿ ನೀರು ನಿಲ್ಲುತ್ತಿದ್ದು, ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗಲಿದೆ. ಆದ್ದರಿಂದ ಡಿಕನ್ಸನ್ ರಸ್ತೆ ಕಡೆಯಿಂದ ಹಲಸೂರು ಕೆರೆ ಬಳಿಯಿರುವ ಪ್ರಮುಖ ರಾಜಕಾಲುವೆಗೆ ಸಂಪರ್ಕವಿರುವ ಡ್ರೈನೇಜ್ ತುಂಬಿರುವ ಹೂಳನ್ನು ತೆರವುಗೊಳಿಸಿ ಮಳೆಯಾದರೆ ಸರಾಗವಾಗಿ ನೀರು ಹರಿಯುವಂತೆ ಮಾಡಿ. ಜೊತೆಗೆ ರಸ್ತೆ ಬದಿ ಹೊಸದಾಗಿ ನಿರ್ಮಿಸಿರುತ್ತಿರುವ ಸೈಡ್ ಡ್ರೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಾಕಿಯಿಯುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಂಡು ಅದನ್ನು ತ್ವರಿತವಾಗಿ ಪುರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
 
ಅಣ್ಣ ಸ್ವಾಮಿ ಮೊದಲಿಯಾರ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಸೆಂಟ್ ಜಾನ್ಸ್ ರಸ್ತೆಗೆ ಸೇರುವ ಉಳಿಕೆ 150 ಮೀಟರ್ ರಸ್ತೆಯನ್ನು ವೈಟ್ ಟಾಪಿಂಗ್ ಅಳವಡಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ತಿಳಿಸಿದರು.
 
ಗುರುದ್ವಾರದ ಮುಂಭಾಗ ರಸ್ತೆ ಕೆಳಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ಹೂಳನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಿ ಎಂದು ಅಧಿಕಾರಿಗೆ ತಿಳಿಸಿದರು. ಆ ಬಳಿಕ ಆರ್.ಕೆ.ಮಠ ರಸ್ತೆಯಲ್ಲಿ ಪಾಲಿಕೆಯ ಕಟ್ಟಡವೊಂದಿದ್ದು, ಆ ಕಟ್ಟಡ ಬಳಕೆಯಾಗದೇ ಇರುವುದನ್ನು ಗಮನಿಸಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಟ್ಟಡವನ್ನು ಉಪಯೋಗಿಸಿಕೊಳ್ಳಲು ಮುಖ್ಯ ಆಯುಕ್ತರು ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಯಿತು.
 
ತಪಾಸಣೆ ವೇಳೆ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ಜಂಟಿ ಆಯುಕ್ತರು ಸರ್ಪರಾಜ್ ಖಾನ್, ಇಂಜಿನಿಯರ್ ವಿಭಾಗದ ಮುಖ್ಯಸ್ಥರು ಪ್ರಭಾಕರ್, ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್, ರಸ್ತೆ ಮೂಲಭೂತ ಸೌಕರ್ಯ ಮತ್ತು ರಾಜಕಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ