ಮಾರ್ಚ್ 1 ರಿಂದ ಮೊಬೈಲ್ ಶಾಲೆಗಳನ್ನು ಪುನರಾರಂಭ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಕೋವಿಡ್ ಹಿನ್ನೆಲೆ ಶಾಲೆಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಪೋಷಕರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಇದೀಗ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಮೊಬೈಲ್ ಶಾಲೆಗಳು ಪುನರಾರಂಭವಾಗುತ್ತಿವೆ.
ಶಾಲೆಬಿಟ್ಟ ಮಕ್ಕಳು, ವಲಸೆ ಕಾರ್ಮಿಕರ ಮಕ್ಕಳು, ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಬಿಬಿಎಂಪಿ ಮೊಬೈಲ್ ಶಾಲೆ ಆರಂಭಿಸಿತ್ತು. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೂ ಮೊಬೈಲ್ ಶಾಲೆ ಬಸ್‌ಗಳಿವೆ.
ಪ್ರತಿದಿನ ನಾಲ್ಕು ಗಂಟೆ ಶಾಲೆ ನಡೆಯಲಿದ್ದು, ಕಟ್ಟಡ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ. ಬಿಎಂಟಿಸಿ ಸಂಸ್ಥೆ ಗುಜರಿಗೆ ಹಾಕುತ್ತಿದ್ದ ಬಸ್‌ಗಳನ್ನು ಬಿಬಿಎಂಪಿ ಖರೀದಿಸಿ ಅದನ್ನು ಮೊಬೈಲ್ ಶಾಲೆಯನ್ನಾಗಿ ಪರಿವರ್ತಿಸಿದೆ. ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಅವರಿರುವ ಸ್ಥಳಕ್ಕೆ ತೆರಳಿ ಪಾಠ ಮಾಡಲಾಗುತ್ತದೆ.