ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ಬಿಲ್ ನೀಡದೆ ಕಣ್ಣಾಮುಚ್ಚಾಲೆ

ಮಂಗಳವಾರ, 8 ಆಗಸ್ಟ್ 2023 (19:50 IST)
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಮಿಷನ್​ ಆರೋಪ ಕೇಳಿಬಂದಿದೆ. ಬಾಕಿ ಬಿಲ್ ಪಾವತಿ ಮಾಡದೇ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದೆ. ಈಗ ಡಿಕೆ ಶಿವಕುಮಾರ್ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಹಣ ಕೇಳಿಲ್ಲ ಅಂತ ಆದ್ರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರರು ಸವಾಲು ಹಾಕಿದ್ದು, ಡಿ.ಕೆ.ಶಿವಕುಮಾರ್ ಗೆ ಗುತ್ತಿಗೆದಾರನಿಂದ ಓಪನ್ ಚಾಲೆಂಜ್ ಮಾಡಲಾಗಿದೆ.

ಬಿಬಿಎಂಪಿ ಗುತ್ತಿಗೆದಾರರ ಸಂಘ ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದರು. ಆದ್ರೆ, ಸುದ್ದಿಗೋಷ್ಟಿಯಲ್ಲಿ  ವಾದ ವಿವಾದ ವಾಗ್ವಾದಕ್ಕೆ ತಿರುಗಿತ್ತು. ಈ ವೇಳೆ ಗುತ್ತಿಗೆದಾರರು ಡಿಕೆ ಶಿವಕುಮಾರ್​​ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಹಣ ಕೇಳಿಲ್ಲ ಎನ್ನುವುದಾದರೆ ಅವರು ನಂಬುವ ಅಜ್ಜಯ್ಯನ ಮಠಕ್ಕೆ ಬಂದು‌ ಪ್ರಮಾಣ ಮಾಡಲಿ. ಹಣ ಕೇಳಿದ್ದಾರೆ ಎಂದು ನಾನು‌‌ ಪ್ರಮಾಣ ಮಾಡುತ್ತೇನೆ ಎಂದು ಗುತ್ತಿಗೆದಾರರೊಬ್ಬರ ಸವಾಲು ಇದೀಗ ಭಾರೀ ವೈರಲ್ ಆಗಿದೆ.

ಬಾಕಿ ಬಿಲ್ ಪಾವತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ ಇದಕ್ಕೆ ಸ್ವತಃ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ಯಾರಿಗೂ ಉತ್ತರ ಕೊಡಲ್ಲ. ನನಗೂ ಪ್ರಜ್ಞೆ ಇದೆ. ನನಗೂ ರಾಜಕಾರಣ ಗೊತ್ತಿದೆ. ಯಾವ ಗುತ್ತಿಗೆದಾರನ ಹಿಂದೆ ಯಾರಿದ್ದಾರೆಂದು ನನಗೂ ಗೊತ್ತಿದೆ. ಯಾವ ಬ್ಲ್ಯಾಕ್​​ಮೇಲ್ ಕೂಡ ನನ್ನ ಮುಂದೆ ನಡೆಯುವುದಿಲ್ಲ. ನಾವು ವಿಪಕ್ಷದಲ್ಲಿದ್ದಾಗ ನಮ್ಮ ಬಳಿ ಹುಡುಕಿಕೊಂಡು ಬರುತ್ತಿರಲಿಲ್ವಾ? ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ. ಇಲ್ಲದಿದ್ದರೆ ಆಗುವುದಿಲ್ಲ. ಯಾರಿಗೋ ಬ್ಲ್ಯಾಕ್​ಮೇಲ್ ಮಾಡಿದಂತೆ ನನಗೆ ಮಾಡಲು ಬರಬೇಡಿ ಎಂದು ಖಡಕ್​ ಆಗಿ ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ