ಬಿಬಿಎಂಪಿ ವಿಭಜನೆ ಜನತೆ ಸಹಿಸೋಲ್ಲ: ದೇವೇಗೌಡ ಕಿಡಿ

ಸೋಮವಾರ, 24 ಅಕ್ಟೋಬರ್ 2016 (16:53 IST)
ನಾಡಪ್ರಭು ಕೆಂಪೇಗೌಡರ ಹೆಸರು ಸಹಿಸಿಕೊಳ್ಳಲು ಆಗದವರು ಬಿಬಿಎಂಪಿಯನ್ನು ನಾಲ್ಕು ಭಾಗವಾಗಿ ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಆರೋಪಿಸಿದ್ದಾರೆ.
 
ಡಾ.ಎಚ್.ಎಂ.ಮರಿಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಮಾಡಲು ಹೊರಟಿರುವುದು ತುಂಬಾ ನೋವು ತಂದಿದೆ. ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬಾರದು. ರಾಜಧಾನಿ ಜನರು ಇದನ್ನು ಸಹಿಸುವುದಿಲ್ಲ ಎಂದು ಹೇಳಿದರು. 
 
ರಾಜ್ಯದ ರೈತರ ಹಿತಾಸಕ್ತಿಗಾಗಿ ಎರಡೆರೆಡು ಬಾರಿ ರಾಜೀನಾಮೆ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ದೆಹಲಿಗೆ ಪ್ರಧಾನಿಯಾಗಿ ಹೋಗಿದ್ದು ದುರಂತ, ನಾನು ಇಲ್ಲೆ ಮುಖ್ಯಮಂತ್ರಿಯಾಗಿ ಉಳಿಯಬೇಕಿತ್ತು ಎಂದು ಅಭಿಪ್ರಾಯಪಟ್ಟರು. 
 
ನಮ್ಮ ರೈತರ ಬೆವರಿನ ಹಣದಿಂದ ನಾವು ಜಲಾಶಯ ಕಟ್ಟಿಕೊಂಡರೆ ಇಲ್ಲಿನ ನೀರನ್ನು ಬೇರೆಯವರಿಗೆ ಕೊಡಿ ಅಂತಾರೆ. ನಾನು ಬದುಕಿರುವಾಗಲೇ ನಮ್ಮ ಜಲಾಶಯದ ನೀರು ನಮ್ಮ ರೈತರ ಹೊಲಕ್ಕೆ ಹೋಗುತ್ತಿಲ್ಲ, ಇನ್ನೆಷ್ಟು ದಿನ ಬದುಕಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ