ಬೆಂಗಳೂರು: ಕರ್ನಾಟಕ ಬೆಲೆ ಏರಿಕೆಗಳ ಪಟ್ಟಿಗೆ ಈಗ ನೀರು ಕೂಡಾ ಅಧಿಕೃತವಾಗಿ ಸೇರ್ಪಡೆಯಾಗಿದೆ. ಕಳೆದ ವಾರ ಹಾಲಿನ ಬೆಲೆ ಏರಿಕೆ ಬರೆಯಾದರೆ ಈ ವಾರ ನೀರಿನ ಬರೆ ಸಿಕ್ಕಿದೆ.
ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯಾಗಲಿದೆ ಎಂದು ಕಳೆದ ಹಲವು ದಿನಗಳಿಂದ ಸುದ್ದಿಯಿತ್ತು. ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸದನದಲ್ಲೇ ಮಾಹಿತಿ ನೀಡಿದ್ದರು. ಹೀಗಾಗಿ ನೀರಿನ ದರ ಏರಿಕೆ ನಿರೀಕ್ಷಿತವಾಗಿತ್ತು.
ಆದರೆ ಹಾಲು, ವಿದ್ಯುತ್ ದರ ಏರಿಕೆ ಬಳಿಕ ಈಗ ನೀರಿನ ದರ ಏರಿಕೆಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಈಗ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ. ಡೊಮೆಸ್ಟಿಕ್ ಕನೆಕ್ಷನ್ ಗೆ ಪ್ರತೀ ಲೀಟರ್ ಗೆ 1 ಪೈಸೆಯಷ್ಟು ಹೆಚ್ಚಳವಾಗಲಿದೆ ಎಂದು ಖಚಿತಪಡಿಸಿದ್ದಾರೆ.
ವಿವಿಧ ಸ್ಲ್ಯಾಬ್ ಗಳಲ್ಲಿ ನೀರಿನ ದರ ಏರಿಕೆ
-ಡೊಮೆಸ್ಟಿಕ್ ಕನೆಕ್ಷನ್ ಗೆ ಗರಿಷ್ಠ ಒಂದು ಲೀಟರ್ ಗೆ ಒಂದು ಪೈಸೆ ಹೆಚ್ಚಳವಾಗಲಿದೆ.
-8 ಸಾವಿರದವರೆಗಿನ ಸ್ಲ್ಯಾಬ್ ಗೆ 0.15 ಪೈಸೆ ಹೆಚ್ಚಳ.
-8-25 ಸಾವಿರ ಲೀಟರ್ ವರೆಗಿನ ಸ್ಲ್ಯಾಬ್ ಗೆ 0.40 ಪೈಸೆ ಹೆಚ್ಚಳ.
-25 ಸಾವಿರಕ್ಕಿಂತ ಹೆಚ್ಚಿನ ಲೀಟರ್ ಸ್ಲ್ಯಾಬ್ ಗೆ 0.80 ಪೈಸೆ ಹೆಚ್ಚಳ.
50-1 ಲಕ್ಷ ಲೀಟರ್ ವರೆಗಿನ ಸ್ಲ್ಯಾಬ್ ಗೆ 1 ಪೈಸೆ ಹೆಚ್ಚಳವಾಗಲಿದೆ.
ಈ ತಿಂಗಳಿನಿಂದಲೇ ದರ ಏರಿಕೆ ಅನ್ವಯವಾಗಲಿದೆ. ಇದರಿಂದಾಗಿ ನೀರು ಬಳಕೆದಾರರಿಗೆ ನೀರಿನ ದರ ಕನಿಷ್ಠ 20-30 ರೂ. ಹೆಚ್ಚುವರಿ ಪಾವತಿಸಬೇಕಾಗಬಹುದು.ಜಲಮಂಡಳಿ ಆರ್ಥಿಕ ಹೊರೆ ತಗ್ಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಜಲಮಂಡಳಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.