ಗುಜರಾತ್ ನಲ್ಲಿ "ಅಬ್ ಕಿ ಬಾರ್ ಮೋದಿ ಕಿ ಹಾರ್ " ನಿಶ್ಚಿತ : ಸುಷ್ಮಿತಾ ದೇವ್

ಶನಿವಾರ, 4 ನವೆಂಬರ್ 2017 (15:22 IST)
ಬೆಂಗಳೂರು: ಕೇಂದ್ರ ಸರ್ಕಾರ ಮಹಿಳೆಯರನ್ನು ಕಡೆಗಣಿಸಿದ್ದು, ಮಹಿಳೆಯರನ್ನ ಕಿಚನ್ ನಲ್ಲೇ ನೋಡಲು ಅವರು ಬಯಸುತ್ತಾರೆ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಕೆಪಿಸಿಸಿ ಮಹಿಳಾ ಘಟಕದಿಂದ ಆಯೋಜಿಸಿರುವ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿ, ಗುಜರಾತ್ ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಇದರ ಬಗ್ಗೆ ಕೇಂದ್ರ ಯಾವ ಕ್ರಮಕೈಗೊಂಡಿದೆ. ಲೋಕಸಭೆಯಲ್ಲಿ ಎಷ್ಟು ಮಂದಿ ಮಹಿಳಾ ಸದಸ್ಯರಿದ್ದಾರೆ. ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಲು‌ ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಹಿಳಾ ಕಾಂಗ್ರೆಸ್ಸಿಗರು ಎಂದೂ ಬೃಹತ್ ಸಮಾವೇಶ ಮಾಡುವ ಅಗತ್ಯವಿಲ್ಲ. ಆದರೆ ಚುನಾವಣೆ ದಿನ ಸಮೀಪಿಸುತ್ತಿರುವಾಗ ಮನೆ ಮನೆಗೆ ಭೇಟಿ ಕೊಡುವ ಸಾಮರ್ಥ್ಯ ಇರೋದು ಮಹಿಳಾ ಕಾಂಗ್ರೆಸ್ಸಿಗರಿಗೆ ಮಾತ್ರ. ಮಹಿಳೆಯರು ಮನಸ್ಸು ಮಾಡಿದ್ರೆ ಚುನಾವಣೆ ಚಿತ್ರಣ ಬದಲಾಯಿಸಬಲ್ಲರು.ಇಡೀ ಭಾರತವನ್ನು ಗುಜರಾತ್ ಮಾಡೆಲ್ ನಲ್ಲಿ ಬದಲಾವಣೆ ಮಾಡುತ್ತೇನೆ ಎಂದು ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ ಈಗ ಗುಜರಾತ್ ಮತದಾರರು ಹೇಳುತ್ತಿದ್ದಾರೆ ವಿಕಾಸ್ ಪಾಗಲ್ ಹೋಗಯಾ ಎಂದು. ನಾವು ಕರ್ನಾಟಕದಲ್ಲಿ ಎಷ್ಟು ಪ್ರಮಾಣದಲ್ಲಿ ಸ್ಥಾನ ಗಳಿಸಿದೆವೋ ,ಈಗ ಗುಜರಾತ್ ನಲ್ಲಿ ಅದಕ್ಕಿಂತ ಹೆಚ್ಚಿನ ಸ್ಥಾನ ಗಳಿಸುತ್ತೇವೆ ಎಂದು ಬಿಜೆಪಿಗೆ ಸವಾಲ್ ಹಾಕಿದರು.

ಈ ಸವಾಲಿನಲ್ಲಿ ನಾನು ಗೆಲ್ಲದೇ ಹೋದರೆ ಮತ್ತೆ ನಾನು ಕರ್ನಾಟಕಕ್ಕೆ ಚುನಾವಣೆ ಪ್ರಚಾರಕ್ಕೆ ಕಾಲಿಡುವುದಿಲ್ಲ. ಆರೆಸ್ಸೆಸ್ ಮತ್ತು ಬಿಜೆಪಿ ನೂರು ವರ್ಷ ಹಿಂದಿದ್ದಾರೆ. ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಕೊಡುವ ಮೂಲಕ ಗೌರವ ಕೊಡುತ್ತಿದ್ದೇನೆ ಎಂದುಕೊಂಡಿದ್ದಾರೆ. ಆದರೆ ಆ ಮೂಲಕ ಅವರು ಮಹಿಳೆಯನ್ನು ಜನಪ್ರತಿನಿಧಿಯಾಗಿ ವಿಧಾನಸಭೆಗೆ, ಪಾಲಿಕೆಗೆ ತರುವ ಬದಲು ಅಡುಗೆ ಮನೆಗೆ ಸೀಮಿತ ಮಾಡಿದ್ದಾರೆ ಎಂದರು.

"ಅಬ್ ಕಿ ಬಾರ್ ಮೋದಿ ಕಿ ಹಾರ್ " ನಿಶ್ಚಿತ. ಮೋದಿ `ಭೇಟಿ ಬಚಾವೋ ಭೇಟಿ ಪಡಾವೋ’ ಎನ್ನುತ್ತಿದ್ದರೆ ಸೋನಿಯಾಗಾಂಧಿ `ಭೇಟಿ‌ಕೋ ಸನ್ಮಾನ್ ದೋ ಅಧಿಕಾರ್ ದೋ’ ಎನ್ನುತ್ತಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ