ಬೆಂಗಳೂರು: ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಬಿಗ್ ರಿಲೀಫ್ ದೊರಕಿದೆ.
ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯವು ತನಿಖಾಧಿಕಾರಿಗಳು ನೀಡುವ ಅಂತಿಮ ವರದಿಯ ಆಧಾರದಲ್ಲಿ ನ್ಯಾಯಿಕ ಪ್ರಕ್ರಿಯೆ ಮುಂದುವರಿಸುವಂತೆ ಆದೇಶಿಸಿದೆ.
ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು, ಶಾಸಕರು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಶುಕ್ರವಾರ ಪ್ರಕಟಿಸಿದರು.
ಪ್ರಕರಣವೇನು?: ತಮ್ಮ ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಹಾಯ ಮಾಡಬೇಕು ಎಂದು ಬೇಡಿ ಬಂದಿದ್ದ ಸಂತ್ರಸ್ತ ಬಾಲಕಿಯ ತಾಯಿ ನೀಡಿರುವ ದೂರಿನ ಅನುಸಾರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ 2024ರ ಫೆಬ್ರುವರಿ 2ರಂದು ಬೆಳಗ್ಗೆ 11ರಿಂದ 11.30ರ ನಡುವೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.