ಮುಡಾ ಹಗರಣ: ಬಲವಂತದಿಂದ ಸಿದ್ದರಾಮಯ್ಯ ಕೈಯಲ್ಲಿ ಪತ್ರ ಬರೆಸಿರಬಹುದು, ಬಿಜೆಪಿ ಹೊಸ ಬಾಂಬ್

Krishnaveni K

ಮಂಗಳವಾರ, 1 ಅಕ್ಟೋಬರ್ 2024 (13:49 IST)
ಬೆಂಗಳೂರು: ಹೈಕೋರ್ಟ್ ತೀರ್ಪು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಬಳಿಕ ನಿನ್ನೆ ಇ.ಡಿ. ಕೇಸು ದಾಖಲಾಗಿದೆ. ರಾಜ್ಯಪಾಲರು ದೆಹಲಿಯ ಕೈಗೊಂಬೆ ಎನ್ನುತ್ತಿದ್ದ ಸಿದ್ದರಾಮಯ್ಯನವರು ನಿವೇಶನ ವಾಪಸ್ ನೀಡುತ್ತಿರುವುದು ಕಾನೂನಿನ ಕುಣಿಕೆಯಿಂದ ಪಾರಾಗುವ ಉದ್ದೇಶದಿಂದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಮಾತನಾಡಿದ ಅವರು, ರಾಜಕೀಯ ಸಹಾನುಭೂತಿ ಪಡೆಯಲು, ಅಧಿಕಾರಕ್ಕಾಗಿ ತೊಡೆ ತಟ್ಟುವ ಸ್ವಪಕ್ಷೀಯರನ್ನು ಸುಮ್ಮನಾಗಿಸಲು ಸೈಟ್ ಹಿಂತಿರುಗಿಸುವ ಈ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು. ಇದು ಕೆಲವೇ ಗಂಟೆಗಳಲ್ಲಿ ಆದರೂ ಅಚ್ಚರಿಯಿಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ತಪ್ಪು ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ. 2011ರಲ್ಲಿ ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ಆರೋಪ ಬಂದಿತ್ತು. ಆಗ, ತಪ್ಪು ಮಾಡದಿದ್ದರೆ ಯಾಕೆ ಸೈಟ್ ಸರೆಂಡರ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದರು ಎಂದರು.

ಕಳಂಕ, ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಇನ್ನಾದರೂ ತಮ್ಮ ಭಂಡತನವನ್ನು ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೆ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೊದಲು ಗೌರವಾನ್ವಿತ ರಾಜ್ಯಪಾಲರ ಕ್ಷಮೆ ಕೇಳಬೇಕು. ಸಾಮಾಜಿಕ ಕಾರ್ಯಕರ್ತ, ಬಡ ಕುಟುಂಬದವರಾದ ಸ್ನೇಹಮಯಿ ಕೃಷ್ಣರ ಮೇಲೆ ದೂರು ದಾಖಲಿಸಿ ಅವರನ್ನು ಬೆದರಿಸುವ ತಂತ್ರವನ್ನು ಮುಖ್ಯಮಂತ್ರಿಗಳು, ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಡಿಜಿಪಿ ಅವರು ತಕ್ಷಣ ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

ಸಿಎಂ ತಮ್ಮ ಸ್ಥಾನದಿಂದ ಇಳಿಯುವುದನ್ನೇ ಕಾಂಗ್ರೆಸ್ ಪಕ್ಷದ ಕೆಲವರು ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತರಾದ ಮಹದೇವಪ್ಪ ಅವರು ಹೇಳಿದ್ದಾರೆ. ಅದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ‘ಸಿದ್ದರಾಮಯ್ಯನವರು ಇವತ್ತು ಇರ್ತಾರೆ, ನಾಳೆ ಹೋಗ್ತಾರೆ’ ಎಂದಿದ್ದಾರೆ. ಇದು ನಿರ್ಗಮನದ ಮುನ್ಸೂಚನೆ. ಡಿಸಿಎಂ ಶಿವಕುಮಾರ್ ಅವರು ಗೌಪ್ಯವಾಗಿ ಪರಮೇಶ್ವರರನ್ನು ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದಾರೆ. ಶಿವಕುಮಾರ್, ಪರಮೇಶ್ವರ್ ಅವರು, ಇನ್ನೂ ಕೂಡ ಸಿದ್ದರಾಮಯ್ಯರನ್ನು ರಕ್ಷಿಸಲು ಸಾಧ್ಯವಿಲ್ಲ; ಕಷ್ಟ ಆಗುತ್ತಿದೆ, ಪಕ್ಷಕ್ಕೂ ಮುಜುಗರ ಆಗುತ್ತಿದೆ. ಸಿದ್ದರಾಮಯ್ಯರು ಬೇಗ ರಾಜೀನಾಮೆ ಕೊಟ್ಟರೆ ಅಷ್ಟೇ ಒಳಿತೆಂಬ ವಿಚಾರ ಚರ್ಚೆ ಆಗಿದೆ ಎಂಬ ವಿಚಾರ ನಮಗೆ ಲಭಿಸಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿಯ ಹಗರಣ, ಮೈಸೂರು ಮುಡಾ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಣದ ದುರುಪಯೋಗ-ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ಹೋರಾಟ ನಡೆಸಿದ್ದೇವೆ.

ಮುಖ್ಯಮಂತ್ರಿಗಳ ಕುಟುಂಬದ ಬಗ್ಗೆ ಆರೋಪ ಬಂದಾಗ ಮುಖ್ಯಮಂತ್ರಿಗಳು ನಮ್ಮ ಹೋರಾಟಕ್ಕೆ ಕಿಂಚಿತ್ತು ಕೂಡ ಬೆಲೆ ಕೊಡದೆ ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಕಪ್ಪು ಚುಕ್ಕಿ ಇರಲಿಲ್ಲ ಎಂದು ಬಡಾಯಿ ಕೊಚ್ಚಿಕೊಂಡಿದ್ದರು ಎಂದು ಆಕ್ಷೇಪಿಸಿದರು.

ಹಿಂದಿನ ಅವಧಿಯಲ್ಲಿ 5 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು, ಭ್ರಷ್ಟಾಚಾರ ಆರೋಪ ಬಂದಾಗ ಲೋಕಾಯುಕ್ತಕ್ಕೆ ಬೀಗ ಹಾಕಿ, ಎಸಿಬಿ ಸ್ಥಾಪಿಸಿದ್ದರು. ಆರೋಪಗಳನ್ನು ಮುಚ್ಚಿ ಹಾಕಲು ಎಸಿಬಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು. ಕೆಂಪಣ್ಣ ಆಯೋಗ ಸ್ಥಾಪಿಸಿದ್ದು, ಸಿದ್ದರಾಮಯ್ಯನವರ ವಿರುದ್ಧ ಗುರುತರ ಆರೋಪಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದರೂ ಸಿದ್ದರಾಮಯ್ಯನವರು ಕಣ್ಮುಚ್ಚಿ ಕುಳಿತಿದ್ದರು ಎಂದು ಟೀಕಿಸಿದರು.

ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು 187 ಕೋಟಿಯ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಮಾಡಿದೆ. ಮುಡಾ ಹಗರಣದಲ್ಲಿ ಅಕ್ರಮವಾಗಿ ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿಯವರಿಗೆ 14 ನಿವೇಶನ ನೀಡಿದ್ದು ಒಂದು ಕಡೆ ಇದ್ದರೆ, ಸಿದ್ದರಾಮಯ್ಯನವರು ಸಿಎಂ ಆದ ಬಳಿಕ ಮೈಸೂರು ಮುಡಾದಲ್ಲಿ ಸಾವಿರಾರು ಕೋಟಿ ಬೆಲೆಬಾಳುವ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅವರಿಗೆ ಬೇಕಾದ ಪುಡಾರಿಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಕೊಟ್ಟಿದ್ದಾರೆ ಎಂದರು.

ಮುಡಾ ಹಗರಣದ ತನಿಖೆಗೆ ಆಗ್ರಹಿಸಿ ಮತ್ತು ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ- ಜೆಡಿಎಸ್ ಪಕ್ಷವು ಬೆಂಗಳೂರಿಂದ ಮೈಸೂರಿಗೆ ಹೊರಟಿದ್ದು, ಬೆಂಗಳೂರಿನ ಹೊರವಲಯದಲ್ಲೇ ಕಟ್ಟಿಹಾಕುವ ಕೆಲಸ ಮಾಡಿದ್ದರು. ನಂತರ ಅಧಿವೇಶನ ಆರಂಭವಾಗುವ ಮೊದಲು ಏಕವ್ಯಕ್ತಿ ತನಿಖಾ ಸಮಿತಿ ರಚಿಸಿದ್ದರು. ನಿಲುವಳಿ ಸೂಚನೆ ಮಂಡಿಸಲು ಮುಂದಾದಾಗ ಅದಕ್ಕೆ ಅವಕಾಶ ಕೊಡಲಿಲ್ಲ. ಅಧಿವೇಶನ ಮೊಟಕುಗೊಳಿಸಿ ಪಲಾಯನವಾದವನ್ನು ಸಿಎಂ ಮಾಡಿದ್ದರು ಎಂದು ಟೀಕಿಸಿದರು.

ಬಿಜೆಪಿ ಸುಮ್ಮನೆ ಕುಳಿತಿಲ್ಲ. ಹಿರಿಯರ ಜೊತೆ ಚರ್ಚೆ ಮಾಡಿ ಬೆಂಗಳೂರು- ಮೈಸೂರು ಪಾದಯಾತ್ರೆ ಮಾಡಿದ್ದೆವು. ಇದರ ಪರಿಣಾಮವಾಗಿ ಸಾಮಾಜಿಕ ಕಾರ್ಯಕರ್ತರು ದೂರು ನೀಡಿ ಹಲವಾರು ಬೆಳವಣಿಗೆ ಆಗಿವೆ ಎಂದು ವಿವರಿಸಿದರು. ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದರು ಎಂದರು. ಸಿದ್ದರಾಮಯ್ಯನವರ ಬಾಮೈದ ಕಾನೂನುಬಾಹಿರವಾಗಿ ಜಾಗ ಖರೀದಿಸಿದ್ದರು. 14 ನಿವೇಶನ ಕೊಟ್ಟದ್ದು ಕಾನೂನುಬಾಹಿರವೇ ಎಂದು ತಿಳಿಸಿದರು.

14 ನಿವೇಶನ ವಾಪಸ್ ಮಾಡುವ ಸಂದರ್ಭ ಬರಲಿದೆ ಎಂದಿದ್ದೆ. ಸಿದ್ದರಾಮಯ್ಯನವರ ಧರ್ಮಪತ್ನಿ ಪಾರ್ವತಿಯವರು ಸಿಎಂ, ಸಿಎಂ ಸುಪುತ್ರರ ಗಮನಕ್ಕೆ ಬರದೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕುಳಿತು ಮುಡಾಕ್ಕೆ ಪತ್ರ ಬರೆದಿದ್ದಾರೆ. 14 ನಿವೇಶನ ವಾಪಸ್ ಕೊಡುವುದಾಗಿ ಹೇಳಿದ್ದಾರೆ.

ಪಾರ್ವತಿಯವರು ಅವರಾಗಿಯೇ ಈ ಪತ್ರ ಬರೆದರೇ? ಬಲವಂತವಾಗಿ ಬರೆದರೋ ನಮಗೆ ಗೊತ್ತಿಲ್ಲ. ತಪ್ಪೇ ಮಾಡಿಲ್ಲ, ನಾನು ಜಗ್ಗುವುದಿಲ್ಲ; ನಾನು ಬಗ್ಗುವುದಿಲ್ಲ; ಇದೆಲ್ಲ ರಾಜಕೀಯಪ್ರೇರಿತ ಎಂದು ಆರ್ಭಟಿಸುತ್ತಿದ್ದ ಮುಖ್ಯಮಂತ್ರಿಯವರು 62 ಕೋಟಿ ಕೊಡ್ತಾರ ನನಗೆ, ನಾನ್ಯಾಕೆ ಸೈಟ್ ವಾಪಸ್ ಕೊಡಲಿ ಎಂದಿದ್ದರು ಎಂದು ನೆನಪಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ