ಸದನದಲ್ಲಿ ಕಾಂಗ್ರೆಸ್ ಬಿಜೆಪಿ ಫೈಟ್

ಬುಧವಾರ, 16 ಫೆಬ್ರವರಿ 2022 (14:05 IST)
ರಾಷ್ಟ್ರಧ್ವಜದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರವಾಗಿ ಆಡಳಿತ, ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ, ಕೋಲಾಹಲ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು
ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸದಸ್ಯರು ಮಾತನಾಡುವ ಮೈಕ್ ಬಂದ್ ಮಾಡಿಸಿದ ಸ್ಪೀಕರ್, ಈ ಮೂಲಕ ಗದ್ದಲ ನಿಯಂತ್ರಣಕ್ಕೆ ಪ್ರಯತ್ನ ಪಟ್ಟರು. ಸ್ಪೀಕರ್ ಮಾತು ಕೇಳದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಈಶ್ವರಪ್ಪ ಮೇಲೆ ಮುಗಿಬಿದ್ದರು.
 
ಇದನ್ನು ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು. ಇದಕ್ಕೂ ಮುನ್ನ ರಾಷ್ಟ್ರಧ್ವಜ ವಿಚಾರವಾಗಿ ಈಶ್ವರಪ್ಪ ಅವರಿಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ಡಿ.ಕೆ.ಶಿವಕುಮಾರ್ ವಾಪಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ಸದನ ಏನು ನಿನ್ನ ಅಪ್ಪನದಾ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
 
ಇದರಿಂದ ಕೆರಳಿದ ಶಿವಕುಮಾರ್, ಸಿದ್ದರಾಮಯ್ಯ ಕುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೋಳಿನ ಶರ್ಟ್ ಎಳೆದುಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌, ಶಿವಕುಮಾರ್ ಎಲ್ಲಿ ಇದ್ದಿರೀ?. ಏನು ಮಾತನಾಡುತ್ತಿದ್ದಿರಿ, ನೆನಪಿದೆಯೇ ? ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಕೂಗಿದಾಗ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷದ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ