ಬಿಜೆಪಿ ಮೂವರು ಸಿಎಂಗಳ ಆಸ್ತಿಯ ತನಿಖೆಯಾಗಲಿ: ಉಗ್ರಪ್ಪ ಸವಾಲ್

ಮಂಗಳವಾರ, 21 ಫೆಬ್ರವರಿ 2017 (20:51 IST)
ಬಿಜೆಪಿ ಪಕ್ಷದ ಮೂವರು ಮುಖಂಡರು ಸಿಎಂ ಆಗುವ ಮೊದಲು ಎಷ್ಟು ಆಸ್ತಿ ಹೊಂದಿದ್ದರು, ಇದೀಗ ಎಷ್ಟು ಆಸ್ತಿ ಹೊಂದಿದ್ದಾರೆ ಎನ್ನುವ ಬಗ್ಗೆ ತನಿಖೆಗೆ ಸಿದ್ದರಾಗಿದ್ದಾರೆಯೇ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಸವಾಲ್ ಹಾಕಿದ್ದಾರೆ. 
 
ಬಿಜೆಪ ಸರಕಾರದ ಐದು ವರ್ಷಗಳ ಅವಧಿಯಲ್ಲಿ ಮೂವರು ಬಿಜೆಪಿ ಮುಖಂಡರು ಸಿಎಂ ಹುದ್ದೆ ಅಲಂಕರಿಸಿದ್ದಾರೆ. ಅವರ ಆಸ್ತಿಯ ಬಗ್ಗೆ ತನಿಖೆ ನಡೆಸಿದರೆ ಸತ್ಯಾಸತ್ಯತೆ ಬಹಿರಂಗವಾಗಲಿದೆ ಎಂದು ಗುಡುಗಿದ್ದಾರೆ.
 
ನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಹದ್ಯೋಗಿ ಸಚಿವರನ್ನು ಜೈಲಿಗೆ ಕಳುಹಿಸುವುದಾಗಿ ಮಾನಸಿಕ ಅಸ್ವಸ್ಥರಂತೆ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಮುಂದೆ ಯಾವತ್ತೂ ಸಿಎಂ ಆಗುವುದಿಲ್ಲ  ಎನ್ನುವುದನ್ನು ನೆನಪಿಡಲಿ ಎಂದು ವ್ಯಂಗ್ಯವಾಡಿದರು.
 
ಒಂದು ವೇಳೆ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಮಾಡಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ. ಇಲ್ಲವೇ ಸಂಬಂಧಪಟ್ಟ ಇಲಾಖೆಗಳಿಗೆ ನೀಡಿ ತನಿಖೆಗೆ ಒತ್ತಾಯಿಸಲಿ. ಅದನ್ನು ಬಿಟ್ಟು ದಾಖಲೆಗಳಿಲ್ಲದೇ ಆರೋಪ ಮಾಡುವುದು ಯಡಿಯೂರಪ್ಪನಂತಹವರಿಗೆ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.
 
ಯಡಿಯೂರಪ್ಪನವರ ವಿರುದ್ಧವೇ ಭ್ರಷ್ಟಾಚಾರದ 21 ಕೇಸ್‌ಗಳು ಬಾಕಿ ಉಳಿದಿವೆ. ಭ್ರಷ್ಟಾಚಾರ ವಿರೋಧಿಯಂತೆ ಮಾತನಾಡುತ್ತಾರೆ ಎಂದು ಲೇವಡ ಮಾಡಿದರು. ನಿಮ್ಮ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಿ. ಇಲ್ಲವಾದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ