ನೋಟ್ ಬ್ಯಾನ್ ನಿರ್ಧಾರ ಬಿಜೆಪಿ ನಾಯಕರಿಗೂ ಗೊತ್ತಿರಲಿಲ್ಲ: ಮಧುಸೂದನ್

ಮಂಗಳವಾರ, 15 ನವೆಂಬರ್ 2016 (19:54 IST)
ನೋಟ್ ಬ್ಯಾನ್ ನಿರ್ಧಾರ ಯಾವ ಬಿಜೆಪಿ ನಾಯಕರಿಗೂ ಗೊತ್ತಿರಲಿಲ್ಲ. ಹಿಂದಿನ ಆರ್‌ಬಿಐ ಗವರ್ನರ್ ರಘುರಾಮ್ ರಾಜ್‌ನ ಅವರಿಗೂ ಗೊತ್ತಿರಲಿಲ್ಲ. ಬೇಕಿದ್ದರೆ ಬಿಜೆಪಿ ನಾಯಕರ ಅಕೌಂಟ್ ಚೆಕ್ ಮಾಡಲಿ. ಕಪ್ಪು ಹಣ ತಡೆಗಟ್ಟಲು ಕೇಂದ್ರ ಸರಕಾರ ಕೈಗೊಂಡಿರುವ ನಿರ್ಧಾರದಿಂದ ಕೆಲವರ ಬಾಲಕ್ಕೆ ಬೆಂಕಿ ಬಿದ್ದಿದೆ. ಹಾಗಾಗಿ ಅವರು ಕುಣಿದಾಡುತ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. 
 
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುರೇಶ್ ಕುಮಾರ ಅವರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಸೂಕ್ತ ತಯಾರಿ ಮಾಡಿಯೇ ಪ್ರಧಾನಿ ನರೇಂದ್ರ ಮೋದಿ ಅವರು 500, 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ನಿರಾಧಾರ ಎಂದು ಹೇಳಿದರು. 
 
ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಕಪ್ಪು ಹಣ ಸಂಗ್ರಹ ಮತ್ತು ನಕಲಿ ನೋಟಿನ ಹಾವಳಿ ವಿರುದ್ಧ ಸಮರ ಆರಂಭವಾಗಿದೆ. ಇದಕ್ಕೆ ಸಾರ್ವಜನಿಕರು ಬೆಂಬಲ ನೀಡಿದ್ದಾರೆ ಎಂದರು. 
 
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯಂತವರೂ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಂತವರು ಮಾತ್ರ ವಿಕೃತ ಮನಸ್ಥಿತಿ ಪ್ರದರ್ಶಿಸಿದ್ದಾರೆ ಎಂದು ಟಾಂಗ್ ನೀಡಿದರು. 
 
ರೆಡ್ಡಿ ಪುತ್ರಿ ವಿವಾದಲ್ಲಿ ಪಾಲ್ಗೊಳ್ಳದಂತೆ ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ.....
 
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳದಂತೆ ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವುದು, ಬಿಡುವುದು ಅವರವರ ವೈಯಕ್ತಿಕ ವಿಚಾರ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ