ಸರ್ಕಾರದಿಂದ ಜನರಿಗೆ ಸಿಗಬೇಕಾದ ಸವಲತ್ತುಗಳಲ್ಲಿ ಬಿಜೆಪಿ ಪಕ್ಷದ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ನೀಡಲ್ಪಡುವ ಲಸಿಕೆ ಹಂಚಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರ ಆರೋಗ್ಯ ತಪಾಸಣೆ ಹಾಗೂ ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿಯಿಂದ ನೀಡಲಾಗುವ ಆಹಾರ ಪೊಟ್ಟಣಗಳನ್ನು ವಿತರಿಸುವ ಕಾರ್ಯವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುತ್ತಿದೆ ಎಂದು ಆಪಾದಿಸಿದರು.
ಇನ್ನು ಕೆಎಸ್ ಆರ್ ಟಿಸಿ ಬಸ್ಸನ್ನು ಐಸಿಯು ಆಗಿ ಪರಿವರ್ತಿಸಿ ಗ್ರಾಮೀಣ ಭಾ
ಗದಲ್ಲಿ ಜನರ ಆರೋಗ್ಯ ತಪಾಸಣೆ ಕಾರ್ಯದಲ್ಲೂ ಇದೇ ರೀತಿ ರಾಜಕೀಯ ನಡೆಯುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕಾದ ಅಧಿಕಾರಿಗಳು ಕೂಡಾ ಬಿಜೆಪಿಯ ಕೈಗೊಂಬೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹರೀಶ್ ಕುಮಾರ್ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಅಬ್ಬಾಸ್, ಲಾರೆನ್ಸ್ ಡಿಸೋಜಾ, ಸುಧೀರ್ ಟಿ.ಕೆ., ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.