ಸಂಸದೀಯ ಮಂಡಳಿ ಸಭೆಗೆ ದಿನಾಂಕ ನಿಗದಿಯಾಗುವುದರೊಂದಿಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಒಂದು ಹಂತಕ್ಕೆ ಬಂದು ತಲುಪಿದೆ. ಮೂರರಿಂದ ನಾಲ್ವರು ಸಚಿವರೂ ಸೇರಿದಂತೆ 32 ಮಂದಿ ಶಾಸಕರು ಈ ಬಾರಿ ಟಿಕೆಟ್ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರೊಂದಿಗೆ ರಾಜ್ಯದಲ್ಲೂ ಗುಜರಾತ್ ಮಾದರಿಯೊಂದಿಗೆ ಬಿಜೆಪಿ ಚುನಾವಣಾ ಆಖಾಡಕ್ಕೆ ಇಳಿಯಲು ಮುಂದಾಗಿದೆ. ಎಲ್ಲ ಕ್ಷೇತ್ರಗಳಿಗೂ ತಲಾ ಮೂವರು ಸಂಭಾವ್ಯರ ಹೆಸರು ಕೊಡಿ ಎಂದು ವರಿಷ್ಠರು ಸೂಚನೆ ನೀಡಿದಾಗಲೇ ಹಲವು ಶಾಸಕರು ತಮಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತ ಎಂಬ ನಿರ್ಧಾರಕ್ಕೆ ಬಂದಿದ್ದರು. ಸಂಭಾವ್ಯರ ಪಟ್ಟಿಯಲ್ಲೂ ಕೆಲವರ ಹೆಸರು ಕೈ ಬಿಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.. ಒಟ್ಟಾರೆಯಾಗಿ 32 ಶಾಸಕರು ತಮ್ಮ ಸ್ಥಾನ ಕಳೆದುಕೊಳ್ಳುವುದು ನಿಚ್ಚಳ ಎನ್ನಲಾಗಿದೆ.. ಈ ಪೈಕಿ ಮೂರರಿಂದ ನಾಲ್ಕು ಸಚಿವರು ಇದ್ದಾರೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆಡಳಿತ ವಿರೋಧಿ ಅಲೆ ವಿರುದ್ಧ ಈಜಲು ಹೊಸ ಮುಖಗಳಿಗೆ ಮಣೆ ಹಾಕುವುದು ಅನಿವಾರ್ಯವಾಗಿದೆ ಅನ್ನೋದು ವರಿಷ್ಠರ ಅಭಿಪ್ರಾಯವಾಗಿದೆ.