ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ನಾನಾ ಟ್ವಿಸ್ಟ್: ವಿಜಯೇಂದ್ರ ಹೇಳಿದ್ದೇನು

Krishnaveni K

ಶುಕ್ರವಾರ, 4 ಏಪ್ರಿಲ್ 2025 (13:14 IST)
ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಈಗ ಹಲವು ಆಯಾಮಗಳು ಸಿಗುತ್ತಿವೆ. ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ  ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ವಿನಯ್ ಸೋಮಯ್ಯ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಕೀಯ ಪ್ರೇರಿತ ಎಫ್ಐಆರ್ ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆಯಲಾಗಿದೆ.  ಸಾವಿನಲ್ಲಿ ವಿರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ಹೆಸರು ಕೇಳಿಬಂದಿದೆ. ಹಿಂದೆ ವಿನಯ್ ಸೋಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಪೊನ್ನಣ್ಣನವರ ಫೋಟೋ ಹಾಕಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಅವರ ಮೇಲೆ ಎಫ್ಐಆರ್ ಹಾಕಲಾಗಿದೆ ಎಂಬುದು ಆರೋಪ. ಇದರಿಂದ ಮನನೊಂದು ಅವರೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆ ಬೆನ್ನಲ್ಲೇ ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ. ರಾಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಅನಗತ್ಯ ಕಿರುಕುಳ, ಒತ್ತಡ, ದೌರ್ಜನ್ಯಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯು ಅತ್ಯಂತ  ಪಾರದರ್ಶಕವಾಗಿ ನಡೆಯಬೇಕೆಂದು ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇನೆ.

ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕ ಒತ್ತಡ ಉಂಟಾಗಲು ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸುವೆ. ಮೃತ ಕಾರ್ಯಕರ್ತ ವಿನಯ್ ಅವರ ನಿಧನದ ನೋವಿನಲ್ಲಿರುವ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕರಣ ಈಗ ರಾಜಕೀಯ ತಿರುವು ಪಡೆಯುವ ಎಲ್ಲಾ ಲಕ್ಷಣಗಳಿವೆ. ಇನ್ನು, ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊನ್ನಣ್ಣ ನನಗೆ ವಿನಯ್ ಸೋಮಯ್ಯ ಯಾರೆಂದೇ ಗೊತ್ತಿಲ್ಲ. ನಾನು ಯಾರಿಗೂ ಕಿರುಕುಳ ನೀಡಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ