ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈಸೂರಿನತ್ತ ಪ್ರಯಾಣಿಸುತ್ತಿದ್ದಾರೆ. ಆದರೆ ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಬಿ ವೈ ವಿಜಯೇಂದ್ರ ಬಾಡಿಗಾರ್ಡ್ ಗಳದ್ದೇ ಕಾಟವಾಗಿದೆ.
ಪಾದಯಾತ್ರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಬಿ ವೈ ವಿಜಯೇಂದ್ರ ನಿರಂತರವಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ದಾರಿಯುದ್ದಕ್ಕೂ ಸಾಕಷ್ಟು ಜನ ಸೇರುತ್ತಿದ್ದಾರೆ. ತಮ್ಮ ಮೆಚ್ಚಿನ ನಾಯಕರನ್ನು ಭೇಟಿಯಾಗಲು ರಾಜಕೀಯ ನಾಯಕರ ಅಭಿಮಾನಿಗಳು ಪ್ರಯತ್ನ ಪಡುತ್ತಿದ್ದಾರೆ.
ಇದೇ ರೀತಿ ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕ ಬಿ ವೈ ವಿಜಯೇಂದ್ರರನ್ನು ಭೇಟಿ ಮಾಡಲು ಅವರ ಪಕ್ಕದಲ್ಲೇ ನಿಂತು ಹೆಜ್ಜೆ ಹಾಕಲು ಆಸೆಪಡುತ್ತಿದ್ದಾರೆ. ಇದಕ್ಕಾಗಿ ಅವರ ಹತ್ತಿರ ಬರಲು ಪ್ರಯತ್ನಿಸಿದರೂ ವಿಜಯೇಂದ್ರ ಸುತ್ತಮುತ್ತ ಇರುವ ಬಾಡಿಗಾರ್ಡ್ ಗಳು ಅದಕ್ಕೆ ಅವಕಾಶ ನೀಡುತ್ತಿಲ್ಲವಂತೆ.
ವಿಜಯೇಂದ್ರ ಹತ್ತಿರ ಹೋಗಲು ಪ್ರಯತ್ನಿಸಿದರೆ ಅವರ ಬಾಡಿ ಗಾರ್ಡ್ ಗಳು ತಳ್ಳಿ ಜನರನ್ನು ದೂರ ಸರಿಸುತ್ತಿದ್ದಾರೆ. ಅವರ ಹತ್ತಿರ ಹೋಗಲೂ ಬಿಡುತ್ತಿಲ್ಲ ಎಂಬುದು ಕಾರ್ಯಕರ್ತರ ಅಳಲು. ವಿಜಯೇಂದ್ರ ಜೊತೆ ಬೇರೆ ಹಲವು ನಾಯಕರೂ ಇರುವ ಕಾರಣಕ್ಕೆ ಭದ್ರತೆ ದೃಷ್ಟಿಯಿಂದ ಅಂಗರಕ್ಷಕರು ಈ ರೀತಿ ಮಾಡುತ್ತಿದ್ದಾರೆ. ಆದರೆ ಇದರಿಂದ ಕಾರ್ಯಕರ್ತರಿಗೆ ಬೇಸರವಾಗುತ್ತಿದೆ.