ಇಂದು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬೊಮ್ಮಾಯಿ

ಬುಧವಾರ, 28 ಜುಲೈ 2021 (09:34 IST)
ಬೆಂಗಳೂರು(ಜು.28): ಬಸವರಾಜ್ ಬೊಮ್ಮಾಯಿ ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೊಮ್ಮಾಯಿ ಅವರು ಸಿಎಂ ಆಗಿ ಆಯ್ಕೆಯಾದ ಹಿನ್ನೆಲೆ, ಅವರ ಮನೆ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.

ಪೊಲೀಸರು ಬೊಮ್ಮಾಯಿ ಮನೆಯ ರಸ್ತೆಯನ್ನೇ ಬಂದ್ ಮಾಡಿದ್ದಾರೆ.  ಹೆಚ್ಚು ಪೊಲೀಸರನ್ನು ಅವರ ಮನೆ ಬಳಿ ನಿಯೋಜಿಸಲಾಗಿದ್ದು, ರಸ್ತೆಯಲ್ಲಿ ಎರಡು-ಮೂರು ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಬೊಮ್ಮಾಯಿ ನಿವಾಸಕ್ಕೆ ಡಿಸಿಪಿ ಧರ್ಮೇಂದ್ರ ಕುಮಾರ್ ಭೇಟಿ ನೀಡಿ, ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಬೊಮ್ಮಾಯಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಕುಟುಂಬಸ್ಥರು ಸಿದ್ದತೆ ಮಾಡಿಕೊಂಡಿದ್ದಾರೆ. ಆರ್ ಟಿ ನಗರದಲ್ಲಿ ಬಸವರಾಜ್ ಬೊಮ್ಮಾಯಿ ನಿವಾಸವಿದ್ದು, ಸಿಎಂ ಆಗಿದ್ದಕ್ಕೆ ಮನೆಯಲ್ಲಿ ಪೂಜೆ ಮಾಡಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜಭವದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇಂದು ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ  ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ,  ರಾಜಭವನದ ಬಳಿಯೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ. ಆರು ಡಿಸಿಪಿ, ಎಸಿಪಿಗಳು, ಇನ್ಸ್ಪೆಕ್ಟರ್ ಗಳು ಸೇರಿ 500 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.  ಪಾಸ್ ಇರೋರಿಗೆ ಮಾತ್ರ ರಾಜ ಭವನದ ಒಳಗೆ ಪ್ರವೇಶ ನೀಡಲಾಗುತ್ತದೆ. ರಾಜ ಭವನ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾದ ಹಿನ್ನೆಲೆ, ಬೊಮ್ಮಾಯಿಗೆ ಹೈಕಮಾಂಡ್ ನಾಯಕರು ಶುಭಾಶಯ ಕೋರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಹಲವು ನಾಯಕರು ದೂರವಾಣಿ ಮೂಲಕ ಶುಭ ಹಾರೈಸಿದ್ದಾರೆ.
ನಿಯೋಜಿತ ಸಿಎಂ ಬಸವರಾಜ್ ಬೊಮ್ಮಾಯಿಯ ಇಂದಿನ ಕಾರ್ಯಕ್ರಮದ ವಿವರ
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬಸವರಾಜ್ ಬೊಮ್ಮಾಯಿ ದೇವರ ದರುಶನ ಪಡೆಯಲಿದ್ದಾರೆ. ಬೆಳಿಗ್ಗೆ 8.30ಕ್ಕೆ  ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಬಾಲು ಬ್ರೂಯಿ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಆರ್ ಟಿ ನಗರದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ರಾಧಾಕೃಷ್ಣ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ. ನಂತರ ರಾಜ್ಯದ ಪವರ್ ಸೆಂಟರ್ ಕಾವೇರಿ ನಿವಾಸಕ್ಕೆ ಭೇಟಿ ನೀಡಿ, ಅಲ್ಲಿ ಬಿಎಸ್ ಯಡಿಯೂರಪ್ಪನವರ ಆಶೀರ್ವಾದ ಪಡೆಯಲಿದ್ದಾರೆ. ಆ ನಂತರ ಕುಟುಂಬಸ್ಥರೊಂದಿಗೆ ರಾಜಭವನಕ್ಕೆ ತೆರಳಲಿದ್ದಾರೆ.
ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಆಯ್ಕೆಯಾದ ಹಿನ್ನೆಲೆ, ಅವರಿಗೆ ಶುಭ ಕೋರಲು ಬಿಜೆಪಿ ಕಾರ್ಯಕರ್ತರು ಹೂ ಗುಚ್ಚ ಹಿಡಿದು ಅವರ ನಿವಾಸಕ್ಕೆ ಆಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ