ಸಚಿವ ಆಂಜನೇಯ ಧರ್ಮದ ಆಚರಣೆಗೆ ಅವಮಾನ ಮಾಡಿದ್ದಾರೆ: ಬಿಎಸ್ ವೈ

ಭಾನುವಾರ, 1 ಅಕ್ಟೋಬರ್ 2017 (16:34 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಮನ್ ಕಿ ಬಾತ್ ನ್ನು‌ಕಾಮ್ ಕಿ ಬಾತ್ ಅಂತಾ ಅಣಕಿಸಿದ ಸಿಎಂ ಸಿದ್ದರಾಮಯ್ಯ ನಡವಳಿಕೆ ಖಂಡಿಸುತ್ತೇನೆ. ಇದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬುರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬಳಿಕ ಮಾತನಾಡಿದ ಬಿಎಸ್ ವೈ, ಆಯುಧ ಪೂಜೆ ಬಗ್ಗೆ ಸಚಿವ ಹೆಚ್.ಆಂಜನೇಯ ಕೆಟ್ಟದಾಗಿ ಮಾತನಾಡುವ ಮೂಲಕ ಸಂಪ್ರದಾಯ, ಧರ್ಮದ ಆಚರಣೆಗೆ ಅಪಮಾನ ಮಾಡಿದ್ದಾರೆ. ಜನ ಇವರಿಗೆ ಬುದ್ಧಿ ಕಲಿಸುತ್ತಾರೆ. ದುರಂಹಕಾರ, ದರ್ಪದಿಂದ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಕಿತ್ತೊಗೆದು, ಬಿಜೆಪಿ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ ಎಂಬ ಭರವಸೆಯಿದೆ ಎಂದರು.

ಬಿಜೆಪಿಯ ಗಾಳಿ ಕರ್ನಾಟಕದ ಉದ್ದಗಲಕ್ಕೆ ಬೀಸುತ್ತಿದೆ. ರಾಮಕೃಷ್ಣ ಹೆಗ್ಡೆಯವರ ಕಾಲದಲ್ಲಿ ಪಕ್ಷದಲ್ಲಿದ್ದ ನರೇಂದ್ರ ಬಾಬು ಕಾಂಗ್ರೆಸ್ ಪಕ್ಷದತ್ತ ತೆರಳಿದ್ರು. ಪಕ್ಷ ಸೂಕ್ತವಾಗಿ ನರೇಂದ್ರ ಬಾಬುರನ್ನು ಬಳಸಿಕೊಳ್ತೇವೆ. ಸೂಕ್ತ ಸ್ಥಾನಮಾನವನ್ನು ನೀಡಿ ಪಕ್ಷ ಸಂಘಟನೆಗೆ ಬಳಸಿಕೊಳ್ತೇವೆ. ಹಿಂದುಳಿದ ವರ್ಗದ ನಾಯಕ ನೆ.ಲ.ನರೇಂದ್ರಬಾಬು ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಹೆಚ್ಚಿದೆ. ರಾಜ್ಯಾದ್ಯಂತ ಬಿಜೆಪಿ ಅಲೆ ಬೀಸುತ್ತಿದೆ. ನರೇಂದ್ರಬಾಬುಗೆ ಯಾವ ಜವಾಬ್ದಾರಿ ಕೊಡಬೇಕು ಎಂದು ಪ್ರಮುಖರೊಂದಿಗೆ ಚರ್ಚಿಸಿ ತೀರ್ಮಾನ‌ಮಾಡುತ್ತಿದೆ ಎಂದರು.

ಬಿಜೆಪಿ ಸೇರ್ಪಡೆಗೊಂಡು ಮಾತನಾಡಿದ ನೆ.ಲ.ನರೇಂದ್ರಬಾಬು, ಕೇಂದ್ರ ಸರ್ಕಾರ ಗಾಂಧಿ ತತ್ವಗಳನ್ನು ಜಾರಿಗೊಳಿಸುತ್ತಿದೆ. ನಾನು ‌ಕಾಯ, ವಾಚಾ, ಮನಸ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

ಇನ್ನು ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆ ವಿಚಾರವಾಗಿ ಸಭೆ ನಡೆಯಿತು. ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ತಂಡಗಳ ಸದಸ್ಯರ ಈ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ ರಾವ್, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಶಾಸಕ ಅರವಿಂದ ಲಿಂಬಾವಳಿ, ಮುಖಂಡ ಬಿ.ಸೋಮಶೇಖರ್, ಕುಮಾರ್ ಬಂಗಾರಪ್ಪ ಭಾಗವಹಿಸಿದ್ದರು.

ನವೆಂಬರ್ 2 ರಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆಯಲಿದ್ದು, ಬೆಂಗಳೂರು ಮತ್ತು ಹುಬ್ಬಳ್ಳಿ ಜಿಲ್ಲೆಗಳಿಂದ ಬೃಹತ್ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಸನವಕರ್ನಾಟಕ ಪರಿವರ್ತನಾ ಯಾತ್ರೆ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವ ರೀತಿ ಬಗ್ಗೆ ಚರ್ಚೆ ನಡೆಯಿತು.

ಫೆಬ್ರವರಿಯಿಂದ ನೀತಿ ಸಂಹಿತೆ ಜಾರಿಯಾಗಲಿದ್ದು, ಇಂತಹ ದೊಡ್ಡ ಕಾರ್ಯಕ್ರಮ ನಡೆಸಲು ಚುನಾವಣಾ ಆಯೋಗ ಅವಕಾಶ ನೀಡಲ್ಲ. ಹೀಗಾಗಿ ಜನವರಿ 15ರೊಳಗೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ಜನ ಜಾತ್ರೆ ನಿರ್ಮಾಣ ಮಾಡಬೇಕು. ಯಾತ್ರೆ ಮುಗಿದ ಮೇಲೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂಬ ಸಂದೇಶ ರವಾನೆಯಾಗಬೇಕು. ಅದಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಯಡಿಯೂರಪ್ಪ ಸಿಎಂ ಆಗಬೇಕು ಎಂಬುದು ನಮ್ಮ ಉದ್ದೇಶವಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಡಿಸೆಂಬರ್ ನಲ್ಲಿ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ಬಳಿಕ ಬಿಜೆಪಿಯ ಎಲ್ಲಾ ರಾಷ್ಟ್ರೀಯ ನಾಯಕರು ಕರ್ನಾಟಕಕ್ಕೆ ಬರುತ್ತಾರೆ. ಅವರು ಮೆಚ್ಚುವ ರೀತಿಯಲ್ಲಿ ನಾವೂ ಸಿದ್ದರಾಗಬೇಕಾಗಿದೆ ಎಂದು ಬಿಎಸ್ ವೈ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ