ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಬಸ್: 30 ಮಂದಿಗೆ ಗಾಯ
ಭಾನುವಾರ, 8 ಮೇ 2016 (15:39 IST)
ಗದಗ್ ಜಿಲ್ಲೆಯಲ್ಲಿ ಆಂಧ್ರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಅಧಿಕ ಮಂದಿಗೆ ತೀವ್ರ ಗಾಯಗಳಾಗಿವೆ. 30 ಮಂದಿಯ ಪೈಕಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ. ಗದಗ ಜಿಲ್ಲೆಯ ಹುಲಕೋಟಿ ಬಳಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯಿತೆಂದು ಗೊತ್ತಾಗಿದೆ.
ರಸ್ತೆಯಿಂದ ಉರುಳಿ ಪಕ್ಕದ ಕಂದಕಕ್ಕೆ ಬಸ್ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ.
ತಿರುವಿನಲ್ಲಿ ವೇಗವಾಗಿ ಬಸ್ ಚಾಲನೆ ಮಾಡಿದ್ದೇ ಬಸ್ ಪಲ್ಟಿ ಹೊಡೆಯಲು ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಗದಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.