ಉಪಚುನಾವಣೆ: ಅಭ್ಯರ್ಥಿಗಳ ಗೆಲುವಿಗಾಗಿ ಸರ್ವ ಪ್ರಯತ್ನಕ್ಕೆ ಮುಂದಾದ ಪಕ್ಷಗಳು
ಬುಧವಾರ, 17 ಅಕ್ಟೋಬರ್ 2018 (19:12 IST)
ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಗೆಲುವಿಗೆ ಪಣ ತೊಟ್ಟಿರುವ ರಾಜಕೀಯ ಪಕ್ಷಗಳು ರಣತಂತ್ರಕ್ಕೆ ಮೊರೆಹೋಗಿವೆ.
ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಎಂದು ಆಡಳಿತಾರೂಢ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ – ಜೆಡಿಎಸ್ ಹಾಗೂ ಪ್ರತಿಪಕ್ಷವಾಗಿರುವ ಬಿಜೆಪಿ ಪಣತೊಟ್ಟಿವೆ. ಶತಾಯಗತಾಯ ಗೆಲ್ಲಲೇಬೇಕೆಂದು ಕಾರ್ಯತಂತ್ರ ರೂಪಿಸುತ್ತಿವೆ.
ಬಳ್ಳಾರಿ, ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.
ಈ ಉಪಚುನಾವಣೆಯಲ್ಲಿ ಗೆಲುವು ಸಾಧ್ಯವಾದರೆ ಮುಂಬರುವ ಲೋಕಸಭೆ ಚುನಾವಣೆವರೆಗೆ ಮೈತ್ರಿ ಮುಂದುವರಿಸಿಕೊಂಡು ಹೋಗಬಹುದು ಎಂಬ ಲೆಕ್ಕಾಚಾರ ಮೈತ್ರಿ ಪಕ್ಷಗಳಲ್ಲಿದೆ.