ನಂದಿಬೆಟ್ಟದಿಂದ ಸಚಿವ ಸಂಪುಟ ಸಭೆ ವಿಧಾನಸೌಧಕ್ಕೆ ಶಿಫ್ಟ್: ಮಾವು ಬೆಳೆಗಾರರ ಕೋಪಕ್ಕೆ ಹೆದರಿದ ಸರ್ಕಾರ

Sampriya

ಬುಧವಾರ, 18 ಜೂನ್ 2025 (18:03 IST)
ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಜೂನ್ 19 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯನ್ನು ಇದೀಗ ದಿಢೀರನೇ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ.

ನಂದಿ ಹಿಲ್ಸ್‌ನಲ್ಲಿ ಪ್ರತಿಭಟನೆ ನಡೆಸಲು ರೈತರು ಯೋಜಿಸಿದ್ದರಿಂದ ಮಾವು ಬೆಳೆಗಾರರ ​​ಕೋಪಕ್ಕೆ ಸರ್ಕಾರ ಹೆದರಿದೆ ಎನ್ನಲಾಗಿದೆ. ರೈತರ ಆಕ್ರೋಶದಿಂದ ಆಗುವ ಮುಜುಗರಿಂದ ತಪ್ಪಿಸಿಕೊಳ್ಳಲು ಸರ್ಕಾರ ಸಚಿವ ಸಂಪುಟ ಸಭೆಯನ್ನು ಸ್ಥಳಾಂತರಿಸಿದೆ. 

ವಿಶೇಷ ಸಚಿವ ಸಂಪುಟ ಸಭೆಗಾಗಿ ಕಳೆದ ಒಂದು ವಾರದಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಶ್ರಮವಹಿಸಿ ಸಾಕಷ್ಟು ಕೆಲಸ ಕಾರ್ಯಗಳನ್ನು ಕೈಗೊಂಡಿದ್ದರು. ನಂದಿ ಬೆಟ್ಟವನ್ನು ಮಧುವಣಗಿತ್ತಿಯಂತೆ ಶೃಂಗಾರ ಮಾಡಲಾಗಿತ್ತು. ಅಂತಿಮ ಹಂತದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಸಭೆ ದಿಢೀರ್ ರದ್ದಾದ ಹಿನ್ನೆಲೆ ಅಧಿಕಾರಿಗಳಲ್ಲಿ ನಿರಾಸೆ ಮೂಡಿಸಿದೆ.

ಅಭಿವೃದ್ಧಿ ವಿಚಾರದಲ್ಲಿ ಘೋಷಣೆ ಸೇರಿದಂತೆ ಕೆಲವು ನಿರ್ಧಾರಗಳು ಇನ್ನೂ ಕಾರ್ಯಗತಗೊಳ್ಳದ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಭೆಯನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಶೀಘ್ರದಲ್ಲೇ ನಂದಿ ಹಿಲ್ಸ್‌ನಲ್ಲಿ ಸಚಿವ ಸಂಪುಟ ಸಭೆಗೆ ಮರು ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.

ಮಾವು ರೈತರ ಬೇಡಿಕೆಗಳನ್ನು ಸರ್ಕಾರ ಕಡೆಗಣಿಸಿರುವುದನ್ನು ವಿರೋಧಿಸಿ ಜೂನ್ 17 ರಂದು ಮುಳಬಾಗಿಲು ಜೆಡಿಎಸ್ ಶಾಸಕರಾದ ಸಮೃದ್ಧಿ ಮಂಜುನಾಥ್ ಮತ್ತು ಶ್ರೀನಿವಾಸಪುರ ಕ್ಷೇತ್ರದ ವೆಂಕಟಶಿವಾರೆಡ್ಡಿ ಅವರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದರು. ನಂದಿ ಹಿಲ್ಸ್‌ನಲ್ಲಿ ನಡೆಯುವ ಸಂಪುಟ ಸಭೆ ವೇಳೆಯಲ್ಲಿ ರೈತರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಮಾಡಲು ಯೋಜಿಸಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ