ILI, SARI ಮಾಹಿತಿ ಕೊಡದ 2 ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದು
ಕೋವಿಡ್-19 ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಆಸ್ಪತ್ರೆಗೆ ಬರುವ ಇನ್ಫ್ಲುಯೆಂಜಾ ಲೈಕ್ ಇಲ್‍ನೆಸ್ (ILI) ಮತ್ತು ತೀವ್ರ ಉಸಿರಾಟದ ತೊಂದರೆ (SARI) ಲಕ್ಷಣವಿರುವ ರೋಗಿಗಳ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ನೋಂದಣಿ ರದ್ದು ಮಾಡಲಾಗಿದೆ.
ಹೀಗಂತ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಎ. ಜಬ್ಬಾರ್ ತಿಳಿಸಿದ್ದಾರೆ.
ಕೊರೋನಾ ಸೋಂಕು ನಿಯಂತ್ರಣದಲ್ಲಿಡಲು ಜಿಲ್ಲೆಯಲ್ಲಿ ಕೆ.ಪಿ.ಎಂ.ಇ. ಕಾಯ್ದೆ 2017ರನ್ವಯ ನೋಂದಣಿ ಮಾಡಿಕೊಂಡಿರುವ ಆಸ್ಪತ್ರೆಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿ ILI ಮತ್ತು SARI ಲಕ್ಷಣವಿರುವ ಪ್ರಕರಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ತಿಳಿಸಲಾಗಿತ್ತು. ಆದರೆ ಈ ಎರಡೂ ಆಸ್ಪತ್ರೆಗಳು ಮಾಹಿತಿ ನೀಡದೇ ಇರುವ ಪ್ರಯುಕ್ತ ನೋಂದಣಿಯನ್ನು ರದ್ದುಪಡಿಸಲಾಗಿದೆ.