ನಗರದ ಪೆಟ್ರೋಲ್ ಬಂಕ್ ಮೇಲೆ ಮುಂಜಾನೆ ಹಠಾತ್ ದಾಳಿ ಬೆಳಕಿಗೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದರೋಡೆ ಕೃತ್ಯ

ಶನಿವಾರ, 3 ಜುಲೈ 2021 (15:37 IST)
ಬೆಂಗಳೂರು:  ಬಿಪಿಸಿಎಲ್ ಪೆಟ್ರೋಲ್ ಬಂಕ್ ನಲ್ಲಿ ಶನಿವಾರ ಮುಂಜಾನೆ ದರೋಡೆ ನಡೆದಿರುವ ಘಟನೆ ನಗರದ ಕೋಲ್ಸ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಈ ದರೋಡೆ ನಡೆದ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
 
ವಿನೋದ್ ಆಟೋ ಸರ್ವೀಸ್ ಪೆಟ್ರೋಲ್ ಬಂಕ್ ಭಾರತಿನಗರ ಪೊಲೀಸ್ ಸ್ಟೇಷನ್ ನಿಂದ ಕೇವಲ 150 ಮೀಟರ್ ದೂರದಲ್ಲಿದೆ. ಆದರೂ ಮೂರು ದ್ವಿಚಕ್ರ ವಾಹನದಲ್ಲಿ ಬಂದಿದ್ದ 7 ಜನರಿದ್ದ ದರೋಡೆಕೋರರ ತಂಡ ಪೆಟ್ರೋಲ್ ಹಾಕಿಸುವ ನೆಪದಲ್ಲಿ ಬಂಕ್ ಗೆ ಬಂದು ಗ್ರಾಹಕರ ಎದುರೇ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಸಿಬ್ಬಂದಿಯ ಬಳಿ ಇದ್ದ 43 ಸಾವಿರ ರೂ. ಹಣವನ್ನು ಕಸಿದು ಪರಾರಿಯಾಗಿದ್ದಾರೆ.
 
ಪೆಟ್ರೋಲ್ ಬಂಕ್ ಬಳಿ  ಮುಂಜಾನೆ 3:30ರ ತನಕ ಹೊಯ್ಸಳ ವಾಹನ ನಿಂತಿತ್ತು. ಆನಂತರ 4.25 ಸಮಯದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುವ ಸೋಗಿನಲ್ಲಿ ಮೂರು ಗಾಡಿಗಳಲ್ಲಿ 7 ಮಂದಿ ಬಂದಿದ್ದರು. ಗ್ರಾಹಕರು ಇದ್ದಾಗಲೇ ಏಕಾ ಏಕಿ ನಮ್ಮ ಸಿಬ್ಬಂದಿ ಮೇಲೆ ಲಾಂಗ್, ಮಚ್ಚು ತೋರಿಸಿ ಬೆದರಿಕೆಯೊಡ್ಡಿ 43 ಸಾವಿರ ರೂಪಾಯಿ ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಿಂದ ನಮ್ಮ ಸಿಬ್ಬಂದಿಯಲ್ಲರೂ ಭಯಭೀತರಾಗಿದ್ದಾರೆ ಎಂದು ಘಟನೆ ನಡೆದಿದ್ದನ್ನು ವಿನೋದ್ ಪೆಟ್ರೋಲ್ ಬಂಕ್ ವ್ಯವಹಾರದ ಪಾಲುದಾರ ದಿವಾಕರ್ ತಿಳಿಸಿದ್ದಾರೆ.
 
ಮಧ್ಯರಾತ್ರಿಯ ನಂತರ ಪೆಟ್ರೋಲ್ ಡೀಸೆಲ್ ಹಾಕಿ ಸಂಗ್ರಹವಾದ ಹಣವನ್ನು ದರೋಡೆಕೋರರು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ಘಟನೆ ನಡೆದಾಗ ಒಬ್ಬ ಸಿಬ್ಬಂದಿ ಮಾತ್ರ ಪೆಟ್ರೋಲ್ ಹಾಕುತ್ತಿದ್ದರು. ಉಳಿದಿಬ್ಬರು ಆಫೀಸ್ ಒಳಗಿದ್ದರು. ಘಟನೆ ಆದ ಕೂಡಲೇ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದರೂ, ಗ್ಯಾಂಗ್  ಪರಾರಿಯಾದರು ಎಂದು ಹೇಳಿದ್ದಾರೆ.
 
ಈ ಎಲ್ಲಾ ಘಟನೆಗಳ ದೃಶ್ಯಾವಳಿಗಳು ಪೆಟ್ರೋಲ್ ಬಂಕ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಭಾರತೀನಗರ ಪೊಲೀಸ್ ಠಾಣೆಗೆ ದೂರು ನೀಡಿ ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಿ, ಆದಷ್ಟು ಶೀಘ್ರವಾಗಿ ದರೋಡೆಕೋರರನ್ನು ಬಂಧಿಸುವಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
 
ಕರೋನಾ, ಲಾಕ್ ಡೌನ್ ನಿಂದಾಗಿ ಮೊದಲೇ ಪೆಟ್ರೋಲ್ ಡೀಲರ್ ಗಳ ಆದಾಯ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮೇಲೆ ಈ ರೀತಿ ದಾಳಿಗಳಾದರೆ ವ್ಯವಹಾರ ನಡೆಸುವುದು ಕಷ್ಟ. ನಗರದಲ್ಲಿರುವ ನಮ್ಮ ಸಿಬ್ಬಂದಿ ಹಾಗೂ ಪೆಟ್ರೋಲ್ ಬಂಕ್ ಗೆ ಪೊಲೀಸರು ಅಗತ್ಯ ಭದ್ರತೆ ಒದಗಿಸಿಬೇಕಿದೆ ಎಂದು ಅಖಿಲ ಕರ್ನಾಟಕ ಪೆಟ್ರೋಲ್ ವ್ಯಾಪಾರಿಗಳ ಮಹಾಮಂಡಲ (ಎ.ಕೆ.ಎಫ್.ಪಿ.ಟಿ) ಸರ್ಕಾರವನ್ನು ಆಗ್ರಹಿಸಿದೆ.
 
ಕರೋನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಈಗಾಗಲೇ ಹಲವರು ನಿರುದ್ಯೋಗಿಗಳಾಗಿದ್ದಾರೆ. ಈ ಪರಿಣಾಮ ನಗರದಲ್ಲಿ ಸುಲಿಗೆ, ದರೋಡೆಯಂತಹ ಕೃತ್ಯಗಳು ಆರಂಭವಾಗಿದೆ. ಈ ಘಟನೆ ಇದಕ್ಕೆ ಸಾಕ್ಷಿಯಾಗಿದೆ.  ಉಳಿದ ಪೆಟ್ರೋಲ್ ಬಂಕ್ ಮಾಲೀಕರು ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದು ಎ.ಕೆ.ಎಫ್.ಪಿ.ಟಿಯ ಉಪಾಧ್ಯಕ್ಷ ಎ.ತಾರಾನಾಥ್ ಹೇಳಿದ್ದಾರೆ.
 
ಉಳಿದ ಅಸೋಸಿಯೇಷನ್ ಗಳು ಸೂಕ್ತ ಭದ್ರತೆಗಾಗಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ