ಮೆಟ್ರೋ ವಿಸ್ತರಣೆ ಅಧ್ಯಯನಕ್ಕೆ ಕೇಂದ್ರ ಅಸ್ತು
ವಿರೋಧದ ನಡುವೆಯೇ ನಮ್ಮ ಮೆಟ್ರೋ ನೆರೆಯ ರಾಜ್ಯ ತಮಿಳುನಾಡಿಗೆ ವಿಸ್ತರಣೆಯಾಗಲು ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಬೊಮ್ಮಸಂದ್ರ- ಹೊಸೂರು ನಡುವಿನ ಕಾರ್ಯ ಸಾಧ್ಯತಾ ಅಧ್ಯಯನಕ್ಕೆ ಕೇಂದ್ರದ ತಾತ್ವಿಕ ಒಪ್ಪಿಗೆ ದೊರಕಿದೆ. ಮೆಟ್ರೋ ಎರಡನೇ ಹಂತ R.V. ರಸ್ತೆ- ಬೊಮ್ಮಸಂದ್ರ ನಡುವೆ ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು 20.5 ಕಿ.ಮೀ. ವಿಸ್ತರಣೆ ಮಾಡುವ ಮೂಲಕ ಬೊಮ್ಮಸಂದ್ರದಿಂದ ಹೊಸೂರು ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಈ ಹಿಂದೆ ರಾಜ್ಯಕ್ಕೆ ಸಲ್ಲಿಸಿತ್ತು. 2022ರ ಜೂನ್ನಲ್ಲೇ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಿತ್ತು. ಈಗ ಕೇಂದ್ರ ಸರ್ಕಾರ ಕೂಡ ಚೆನ್ನೈ ಮೆಟ್ರೋ ರೈಲು ನಿಗಮದ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಇದಕ್ಕಾಗಿ 75 ಲಕ್ಷ ರೂ. ಅನುದಾನವನ್ನೂ ನೀಡಿದೆ ಎಂದು ಮೂಲಗಳು ತಿಳಿಸಿವೆ.