ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರ ಈ ಒಳ್ಳೆಯ ಕೆಲಸ ಮಾಡಿದೆ ಎಂದು ಮಾತನಾಡಬೇಕಿತ್ತು. ಪರಿಸ್ಥಿತಿ ಬದಲಾಗಿದೆ. ರಾಜ್ಯದ ಅನುಭವಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಅಸಹಾಯಕರಾಗಿದ್ದಾರೆ. ಸರಕಾರ ಗ್ಯಾರಂಟಿ ಹಣ ಕೊಟ್ಟಿಲ್ಲ; ಅಕ್ಕಿ ಸಿಕ್ಕಿಲ್ಲ; 2 ಸಾವಿರ ರೂ. ಆರು ತಿಂಗಳಿನಿಂದ ಬಂದಿಲ್ಲ. ಆರು ತಿಂಗಳಿನಿಂದ ವಂಚನೆ ಆಗಿದೆ ಎಂದು ಮಾತನಾಡುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಅಧಿಕಾರಕ್ಕಾಗಿ, ಮುಖ್ಯಮಂತ್ರಿ ಯಾರಾಗಬೇಕೆಂಬ ಕಚ್ಚಾಟ, ಕಿತ್ತಾಟ ಮುಂದುವರೆದಿದೆ. ಅದರಲ್ಲೂ ಇನ್ನೊಂದು ರೀತಿಯ ಪ್ರಚಾರದಲ್ಲಿ ಈ ಸರಕಾರ ಇದೆ ಎಂದು ಅವರು ಆಕ್ಷೇಪಿಸಿದರು. ಬೆಟ್ಟಿಂಗ್ ದಂಧೆಯಲ್ಲಿ ಇವತ್ತು 3 ಜನರ ಪ್ರಾಣತ್ಯಾಗ ಆಗಿದೆ. ಆನ್‍ಲೈನ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ರಾಜ್ಯದಲ್ಲಿ ನಡೆಯುತ್ತಿದೆ ಎಂದು ದೂರಿದರು.
ಸಮಗ್ರ ತನಿಖೆ ನಡೆಸಲು ಆಗ್ರಹ
ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲ್ಲೂಕಿನಲ್ಲಿ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಮಕ್ಕಳು ಅಸುನೀಗಿದ್ದಾರೆ. ಅದು ಕೊಲೆ ಎಂದು ಆಪಾದನೆಗಳಿವೆ. ನಾನು ಎಸ್ಪಿಯವರಿಗೂ ಮಾತನಾಡಿದ್ದೇನೆ. ಇದರ ಸಮಗ್ರ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದರು. ಈ ಸರಕಾರವು ಜನರ ಪ್ರಾಣ, ಮಾನದ ವಿಚಾರದಲ್ಲಿ ಒಂದು ರೀತಿಯ ಆಟ ಆಡುತ್ತಿದೆ ಎಂದು ಟೀಕಿಸಿದರು.
ಪಾರ್ಕಿನ ಜಾಗ ಬೇರೆ ಉದ್ದೇಶಕ್ಕೆ ಕೊಡದಿರಿ...
ಗುಲ್ಬರ್ಗದಲ್ಲಿ ಪಾರ್ಕಿಗಾಗಿ ಇಟ್ಟಿದ್ದ ಜಾಗವನ್ನು ಸಿದ್ಧಾರ್ಥ ವಿಹಾರ ಟ್ರಸ್ಟ್ ಪರಿವರ್ತನೆ ಮಾಡಿ ಕೊಡಿ ಎಂದು ಕೇಳಿದ ವಿಷಯವನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಕಾನೂನಿನಡಿ ಆ ರೀತಿ ಮಾಡಲು ಆಗುವುದಿಲ್ಲ. ಅದು ಆಟದ ಮೈದಾನ, ಪಾರ್ಕ್‍ಗೆ ಇಟ್ಟಿದ್ದರೆ ಅದನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಅಸಾಧ್ಯ ಎಂದು ನುಡಿದರು. ಅದನ್ನು ಪರಿವರ್ತಿಸಬಾರದು ಎಂಬ ಅಭಿಪ್ರಾಯ ತಮ್ಮದೂ ಕೂಡ ಆಗಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.