ನಿಧಿ ಆಸೆಗೆ ಜ್ಯೋತಿಷಿ ಮಾತು ಕೇಳಿ ಅಮಾಯಕನನ್ನೇ ಬಲಿ ಕೊಟ್ಟ ಪಾಪಿಗಳು

Krishnaveni K

ಬುಧವಾರ, 12 ಫೆಬ್ರವರಿ 2025 (10:26 IST)
ಚಿತ್ರದುರ್ಗ: ಪಶ್ಚಿಮ ದಿಕ್ಕಿಗೆ ಹೋಗಿ ನರಬಲಿ ಕೊಟ್ಟರೆ ನಿಧಿ ಸಿಗುತ್ತದೆ ಎಂಬ ಜ್ಯೋತಿಷಿ ಮಾತು ಕೇಳಿ ಪಾಪಿಯೊಬ್ಬ ಅಮಾಯಕನನ್ನು ಕೊಚ್ಚಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಪರುಶುರಾಂ ಪುರ ಠಾಣಾ ವ್ಯಾಪ್ತಿಯ 50 ವರ್ಷದ ಬಿಎಚ್ ಪ್ರಭಾಕರ್ ಎಂಬಾತ ಕೊಲೆಗೀಡಾತ. ಆನಂದ್ ಎಂಬಾತ ಜ್ಯೋತಿಷಿ ಮಾತು ಕೇಳಿ ಕೊಲೆ ಮಾಡಿದ ಪಾಪಿ. ಈತ ಆಂಧ್ರಪ್ರದೇಶದ ಹೋಟೆಲ್ ಒಂದರಲ್ಲಿ ನೌಕರನಾಗಿದ್ದ.

ಇತ್ತೀಚೆಗೆ ಈತನಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಿತ್ತು. ಈ ಸಂಬಂಧ ಆತ ಜ್ಯೋತಿಷಿಯ ಮೊರೆ ಹೋಗಿದ್ದ. ಜ್ಯೋತಿಷಿ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಆತನ ಮಾತು ನಂಬಿ ಪ್ರಭಾಕರ್ ನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

ಪರಶುರಾಂಪುರ ಕಡೆಗೆ ಬಂದಿದ್ದ ಆರೋಪಿ ಬಸ್ ನಿಲ್ದಾಣದಲ್ಲಿ ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದ ಬಡ ಪ್ರಭಾಕರ್ ನನ್ನು ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ಕರೆದೊಯ್ದಿದ್ದ. ಬಳಿಕ ಪಶ್ಚಿಮ ದಿಕ್ಕಿಗೆ ಕರೆದುಕೊಂಡು ಹೋಗಿ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಇದೀಗ ಹಂತಕ ಆನಂದ್ ರೆಡ್ಡಿ ಮತ್ತು ಆತನಿಗೆ ಸಲಹೆ ನೀಡಿದ ಜ್ಯೋತಿಷಿ ಇಬ್ಬರನ್ನೂ ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ