ಸಿಎಂ ಗ್ರಾಮವಾಸ್ತವ್ಯ ಎಫೆಕ್ಟ್; ಮುಖ್ಯಗುರುಗಳ ಮೇಲೆ ಸಿಟ್ಟಾದ ಆಯುಕ್ತರು

ಶನಿವಾರ, 29 ಜೂನ್ 2019 (18:56 IST)
ಸಿಎಂ ಗ್ರಾಮ ವಾಸ್ತವ್ಯ ನಡೆಸಿದ ಬೆನ್ನೆಲ್ಲೆ ಕರೆದಿದ್ದ ಸಭೆಯಲ್ಲಿ ಮುಖ್ಯಗುರುಗಳು ಸರಿಯಾದ ಮಾಹಿತಿಯೊಂದಿಗೆ ಆಗಮಿಸದ ಕಾರಣ ಅವರ ಮೇಲೆ ವಿಭಾಗದ ಪ್ರಾದೇಶಿಕ ಆಯುಕ್ತರು ಗರಂ ಆಗಿರುವ ಘಟನೆ ನಡೆದಿದೆ.

ಹೈದ್ರಾಬಾದ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆರು ಜಿಲ್ಲೆಯ ಶಾಲೆಗಳಲ್ಲಿರುವ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಶಾಲೆಗಳ ಬಲವರ್ಧನೆಗೆ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯಗಳ ಕುರಿತು ಬರುವ ಜುಲೈ 3ರ ಒಳಗೆ ವರದಿ ನೀಡುವಂತೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೂನ್ 27 ರಂದು ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಭಾಗದಲ್ಲಿನ ಶಾಲೆಗಳ ದುರಸ್ತಿ, ಹೊಸ ಕಟ್ಟಡಗಳ ನಿರ್ಮಾಣ ಸೇರಿದಂತೆ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ  ಕರೆದಿದ್ದ ಆರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಜೊತೆ ಚರ್ಚಿಸಿ ಅವರು ಮಾತನಾಡಿದ್ರು.

ಜುಲೈ 3ರ ಒಳಗೆ ಎಲ್ಲಾ ಡಿಡಿಪಿಐಗಳು ವರದಿ ನೀಡಬೇಕು.  ಜುಲೈ 4 ಅಥವಾ  5 ರಂದು ಮತ್ತೊಮ್ಮೆ ಪರಾಮರ್ಶಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದರು. 

ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರು, ದುರಸ್ತಿ, ವಿದ್ಯುತ್, ಕಂಪೌಂಡ್ ಮುಂತಾದವುಗಳ ಬಗ್ಗೆ ಮಾಹಿತಿ ನೀಡಬೇಕು. ಜಮೀನಿನ ವಿವಾದ ಇಲ್ಲದ ಕಡೆ ಮಾತ್ರ ಕಂಪೌಂಡ್ ನಿರ್ಮಿಸುವ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಅವರು ಸೂಚಿಸಿದರು.

ಅನುದಾನದ ಬಗ್ಗೆ ಮಾಹಿತಿ ಇಲ್ಲ:  ಶಾಲೆಗಳ ನಿರ್ವಹಣೆಗೆ ಸಾಕಷ್ಟು ಅನುದಾನ ಸರ್ಕಾರದಿಂದ ನೀಡಲಾಗುತ್ತದೆ. ಆದರೆ, ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ನೀಡುವ ಅನುದಾನದ ಬಗ್ಗೆ ಮುಖ್ಯೋಪಾಧ್ಯಾಯರಿಗೆ ಸರಿಯಾದ ಮಾಹಿತಿಯೇ ಇಲ್ಲ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಸಿಟ್ಟಾದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ