ಬೆಂಗಳೂರು: ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಟೀಕೆ ಮಾಡಿರುವ ಸಿಎಂ ಸಿದ್ದರಾಮಯ್ಯಗೆ ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.
ಕೇಂದ್ರದಿಂದ ರಾಜ್ಯಗಳಿಗೆ ಕೊಡುವ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಈ ಬಾರಿ 6,310 ಕೋಟಿ ರೂ. ಮಾತ್ರ ಸಿಕ್ಕಿದೆ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ತಕ್ಷಣವೇ ಪ್ರತಿಕ್ರಿಯಿಸಿರಲಿಲ್ಲ. ಆದರೆ ಈಗ ಎರಡು ದಿನಗಳ ನಂತರ ಸರಣಿ ಟ್ವೀಟ್ ಮಾಡಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ನಾನು ಇಷ್ಟು ದಿನವೂ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಸುಮ್ಮನಿದ್ದಿದ್ದು ಯಾಕೆ ಎಂದರೆ ಕರ್ನಾಟಕದ ಬಿಜೆಪಿ ಸಂಸದರು ಮಾತನಾಡುತ್ತಾರೆಯೇ ಎಂದು ನೋಡಲು. ಆದರೆ ಯಾವೊಬ್ಬ ಬಿಜೆಪಿ ಸಂಸದರೂ ಕೇಂದ್ರದ ಬಳಿ ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚಕಾರವೆತ್ತಿಲ್ಲ. ಹೀಗಾಗಿಯೇ ಜನರ ಮುಂದೆ ಕೇಂದ್ರದ ಅನ್ಯಾಯದ ಬಗ್ಗೆ ತೆರೆದಿಡಲು ಹೊರಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರಲ್ಲಿ ಕೆಲವರು ಅಂಕಿ ಅಂಶ ಸಮೇತ ತಿರುಗೇಟು ಕೊಟ್ಟರೆ ಮತ್ತೆ ಕೆಲವರು ನೀವು ಹೀಗೆ ಬಂದ ಹಣವನ್ನು ನಿಮ್ಮ ಫ್ರೀ ಯೋಜನೆಗಳಿಗೆ ಖರ್ಚು ಮಾಡಿ ಖಾಲಿ ಮಾಡ್ತೀರಿ. ಮಧ್ಯಮ ವರ್ಗದ ಜನರಿಗೆ ದರ ಹೆಚ್ಚಳದ ಬರೆ ಎಳೆಯುತ್ತೀರಿ ಎಂದು ಟಾಂಗ್ ಕೊಟ್ಟಿದ್ದಾರೆ. ಕೆಲವರು ಸಿದ್ದರಾಮಯ್ಯ ವಾದವನ್ನು ಸಮರ್ಥಿಸಿಕೊಂಡಿದ್ದು ಕೇಂದ್ರದ ಅನ್ಯಾಯದ ವಿರುದ್ಧ ಧ್ವನಿಯೆತ್ತಬೇಕು ಎಂದಿದ್ದಾರೆ.