ರಾಜ್ಯದಲ್ಲೇ ಸಮಸ್ಯೆ ಬೆಟ್ಟದಷ್ಟಿರುವಾಗ ವಯನಾಡು ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ನಿರ್ಧರಿಸಿದ ಸಿಎಂ ಸಿದ್ದರಾಮಯ್ಯ

Krishnaveni K

ಬುಧವಾರ, 11 ಡಿಸೆಂಬರ್ 2024 (14:30 IST)
ಬೆಂಗಳೂರು: ರಾಜ್ಯದಲ್ಲೇ ಬೇಕಾದಷ್ಟು ಸಮಸ್ಯೆಗಳಿರುವಾಗ ಸಿಎಂ ಸಿದ್ದರಾಮಯ್ಯ ನೆರೆ ರಾಜ್ಯ ಕೇರಳದ ವಯನಾಡಿನ ಗುಡ್ಡ ಕುಸಿತ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಟೀಕೆ ಮಾಡಿರುವ ಬಿಜೆಪಿ ಎಂಎಲ್ ಸಿ ಸಿಟಿ ರವಿ, ರಾಜ್ಯದಲ್ಲೇ ಬಾಣಂತಿಯರ ಸಾವು, ರೈತರ ಆತ್ಮಹತ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ನೆರೆ ರಾಜ್ಯದ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿರುವುದು ಮಾನವೀಯತೆಯಿಂದಲ್ಲ. ಗುಲಾಮಗಿರಿಯ ಸಂಕೇತ ಎಂದು ಸಿಟಿ ರವಿ ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ವಯನಾಡು ಈ ಹಿಂದೆ ರಾಹುಲ್ ಗಾಂಧಿ ಪ್ರತಿನಿಧಿಸಿದ್ದ ಮತ್ತು ಈಗ ಅವರ ಸಹೋದರಿ ಪ್ರಿಯಾಂಕ ವಾದ್ರಾ ಪ್ರತಿನಿಧಿಸುತ್ತಿರುವ ಕ್ಷೇತ್ರ. ರಾಹುಲ್ ಗಾಂಧಿ ಸೂಚನೆ ಮೇರೆಗೇ ಕರ್ನಾಟಕ ಸರ್ಕಾರ ಈ ಹಿಂದೆ ವಯನಾಡು ಸಂತ್ರಸ್ತರಿಗೆ 100 ಮನೆ ಕಟ್ಟಿಕೊಡುವ ನಿರ್ಧಾರ ಮಾಡಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಇದೀಗ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನೆ ಕಟ್ಟಿಸಿಕೊಡುವುದಾಗಿ ವಾಗ್ದಾನ ನೀಡಿರುವುದು ಟೀಕೆಗೆ ಗುರಿಯಾಗಿದೆ. ಈ ಹಿಂದೆಯೂ ಕರ್ನಾಟಕ ಸರ್ಕಾರ ಕೇರಳದಲ್ಲಿ ಆನೆ ದಾಳಿಗೆ ಬಲಿಯಾದ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆಗಲೂ ರಾಹುಲ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಪರಿಹಾರ ಸೂಚಿಸಿತ್ತು ಎನ್ನಲಾಗಿತ್ತು. ನಮ್ಮ ರಾಜ್ಯದಲ್ಲೇ ಪರಿಹರಿಸಬೇಕಾದ ಸಮಸ್ಯೆಗಳು ಬೇಕಷ್ಟಿರುವಾಗ ನೆರೆ ರಾಜ್ಯದ ಸಮಸ್ಯೆಗಳಿಗೆ ಕರ್ನಾಟಕ ಯಾಕೆ ಆರ್ಥಿಕ ಸಹಾಯಕ್ಕೆ ಮುಂದಾಗಬೇಕು ಎಂಬುದು ಎಲ್ಲರ ಪ್ರಶ್ನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ