ಬಾಗಲಕೋಟೆ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಹಿಂದೆ ಲವ್ ಜಿಹಾದ್ ಕೈವಾಡವಿದೆ ಎಂದು ಆರೋಪಿಸಿದ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಕೇವಲ ರಾಜಕೀಯಕ್ಕೋಸ್ಕರ ಆ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನೇಹಾ ಪ್ರಕರಣದ ತನಿಖೆಯನ್ನು ನಾವು ತಕ್ಷಣವೇ ಸಿಐಡಿಗೆ ಕೊಟ್ಟಿದ್ದೇವೆ. ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆ ಕೊಡಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಈ ಬಗ್ಗೆ ಪಬ್ಲಿಕ್ ಕ್ಲಾಸಿಕ್ಯೂಟರ್ ಜೊತೆ ಕೂಡ ಮಾತನಾಡಿದ್ದೇನೆ ಎಂದು ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಲವ್ ಜಿಹಾದ್ ಎಂದು ರಾಜಕೀಯಕ್ಕೋಸ್ಕರ ಹೇಳುತ್ತಿದ್ದಾರೆ. ಹಾಗಾದರೆ ಅಮಿತ್ ಶಾ ಕೇಂದ್ರದ ಗೃಹ ಮಂತ್ರಿ ಆಗಿದ್ದುಕೊಂಡು ಮಣಿಪುರದ ಘಟನೆ ಬಗ್ಗೆ ಯಾಕೆ ಒಂದೇ ಒಂದು ಮಾತನಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಮಣಿಪುರದಲ್ಲಿ ಅಷ್ಟೊಂದು ಹಿಂಸಾಚಾರವಾದರೂ ಅಲ್ಲಿದ್ದ ಸರ್ಕಾರವನ್ನೇ ಮುಂದುವರಿಸಿದ್ದರು. ಕೇಂದ್ರದ ಗ್ರಹ ಸಚಿವರಾಗಿದ್ದುಕೊಂಡು ನೀವು (ಅಮಿತ್ ಶಾ) ಏನು ಮಾಡಿದಿರಿ? ಮುಖ್ಯಮಂತ್ರಿಯನ್ನು ಬದಲಾಯಿಸಿದಿರಾ ಅಥವಾ ಸರ್ಕಾರವನ್ನು ವಜಾ ಮಾಡಿದಿರಾ ಎಂದು ವಾಗ್ದಾಳಿ ನಡೆಸಿಸದರು.
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವನ್ನು ವೈಯಕ್ತಿಕ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಮಿತ್ ಶಾ ಈಚೆಗೆ ವಾಗ್ದಾಳಿ ನಡೆಸಿದ್ದರು. ಕಾಲೇಜು ಆವರಣದಲ್ಲಿ ನಡೆದ ಕೊಲೆ ಅದು ಹೇಗೆ ಖಾಸಗಿ ವಿಚಾರವಾಗುತ್ತದೆ ಎಂದು ಅಮಿತ್ ಶಾ ಪ್ರಶ್ನಿಸಿದ್ದರು.