ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಭೋದನೆ ಮಾಡಿದ ಸಿಎಂ ಸಿದ್ದರಾಮಯ್ಯಗೆ ಈಗ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಗುದ್ದು ನೀಡುತ್ತಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಭೋದಿಸಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ ಕ್ಷಮೆ ಯಾಚಿಸಿದ್ದರು. ಜೊತೆಗೆ ಅದು ಗ್ರಾಮೀಣ ಅಭ್ಯಾಸ ಬಲದಿಂದ ಹಾಗೆ ಹೇಳಿದ್ದಷ್ಟೇ ಎಂದು ಸಮಜಾಯಿಷಿ ನೀಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ಸಿಎಂ ಸಿದ್ದು, ಬಿಜೆಪಿಯವರು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನನ್ನಂತೆ ಶೋಷಿತ ವರ್ಗದಿಂದ ಬಂದ ದಲಿತ ಸಮುದಾಯದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಡೆಗಣಿಸಿದ್ದಕ್ಕೆ ಆಕ್ರೋಶವಿತ್ತು. ಅದೇ ಆಕ್ರೋಶದಲ್ಲಿ ಮಾತನಾಡುವಾಗ ಬಾಯ್ತಪ್ಪಿ ಏಕವಚನದಲ್ಲಿ ಮಾತನಾಡಿದೆ. ನಾನು ಹಳ್ಳಿಯಿಂದ ಬಂದವನು. ನಮ್ಮಲ್ಲಿ ಹಿರಿಯರನ್ನೂ ಏಕವಚನದಿಂದ ಮಾತನಾಡಿಸಿ ರೂಢಿ. ಹಾಗೆಯೇ ಅಭ್ಯಾಸ ಬಲದಿಂದ ಆ ರೀತಿ ಸಂಭೋದಿಸಿದ್ದೆ ಎಂದು ಸಮಜಾಯಿಷಿ ನೀಡಿದ್ದರು.
ಆದರೆ ಇದಕ್ಕೆ ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಟಾಂಗ್ ಕೊಟ್ಟಿದ್ದು, ನೀವು ಏಕವಚನದಲ್ಲಿ ಮಾತನಾಡಿಸುವಾಗ ಮಾತ್ರ ಗ್ರಾಮೀಣ ಸೊಗಡು ನೆಪ. ಬೇರೆಯವರು ಮಾತನಾಡಿದರೆ ಅಗೌರವವಾ? ತಾಕತ್ತಿದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದ ನಿಮ್ಮ ನಾಯಕರನ್ನು ಏಕವಚನದಿಂದ ಮಾತನಾಡಿಸಿ ನೋಡೋಣ ಎಂದು ನೆಟ್ಟಿಗರು ಸವಾಲೆಸೆದಿದ್ದಾರೆ.
ಈ ಹಿಂದೆಯೂ ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿಸಿ ಕೊನೆಗೆ ಅದು ಗ್ರಾಮೀಣ ಸೊಗಡು ಎಂದಿದ್ದರು. ಇದೀಗ ಮತ್ತೆ ಅದೇ ನೆಪ ಹೇಳಿದ್ದಕ್ಕೆ ಬಿಜೆಪಿ ಬೆಂಬಲಿಗರು, ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.