ಪ್ರಧಾನಿಯವರದ್ದು ಹಿಂದುತ್ವದ ಭಾಷಣವಾದರೆ ಕೇಳುವ ಅಗತ್ಯವಿಲ್ಲ: ಸಿಎಂ

ಸೋಮವಾರ, 11 ಸೆಪ್ಟಂಬರ್ 2017 (13:23 IST)
ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣದ 125ನೇ ವರ್ಷಾಚರಣೆ ಮತ್ತು ಪಂಡೀತ್ ದೀನ ದಯಾಳ್ ಉಪಾಧ್ಯಾಯ್ ಅವರ 100ನೇ ವರ್ಷಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರಮೋದಿ ದೆಹಲಿಯ ವಿಜ್ಞಾನ ಭವನದಲ್ಲಿ ಭಾಷಣ ಮಾಡಿದರು. ಈ ಭಾಷಣವನ್ನ ಪ್ರತಿಯೊಬ್ಬರೂ ಕೇಳಲೇಬೇಕೆಂದು ಮೈಸೂರು ವಿಶ್ವವಿದ್ಯಾಲಯ ಮತ್ತು ಉಜಿಸಿ ಆದೇಶ ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ಮೋದಿ ಭಾಷಣ ಕೇಳಲು ಆ ಯೋಜಿಸಿದ್ದ ಕಾರ್ಯಕ್ರಮವನ್ನ ವಿರೋಧಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇಷ್ಟು ವರ್ಷಗಳಲ್ಲಿ ತಮ್ಮ ಭಾಷಣವನ್ನ ವಿದ್ಯಾರ್ಥಿಗಳು ಕೇಳಲೇಬೇಕು ಎಂದು ಒತ್ತಡ ಹೇರಿದ ಪ್ರಧಾನಮಂತ್ರಿಯನ್ನ ಕಂಡಿದ್ದು ಇದೇ ಮೊದಲು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನರೇಂದ್ರ ಮೋದಿಯವರು ದೀನ ದಯಾಳ್ ಅವರ ಕುರುತಾಗಿ ಮಾತನಾಡುವುದಾದರೆ, ಅದು ಹಿಂದುತ್ವದ ಭಾಷಣವಾಗಿರುತ್ತದೆ. ಹಿಂದುತ್ವದ ಭಾಷಣವಾದರೆ ಅದನ್ನ ಕೇಳುವ ಅಗತ್ಯ ಇಲ್ಲ. ಮೈಸೂರು ವಿಶ್ವವಿದ್ಯಾಲಯದ ಆದೇಶದ ಬಗ್ಗೆ ನನಗೆ ತಿಳಿದಿಲ್ಲ. ವಿಚಾರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ