ನಮ್ಮಲ್ಲಿ ಪ್ರಧಾನಿ ಯಾರೆಂದು ನಿರ್ಧರಿಸೋದು ಪಕ್ಷ, ಬಿಜೆಪಿಯವರಿಗೆ ಈ ತಾಕತ್ತಿದೆಯಾ: ಸಿಎಂ

Krishnaveni K

ಶುಕ್ರವಾರ, 18 ಜುಲೈ 2025 (17:01 IST)
ಬೆಂಗಳೂರು: ನಮ್ಮಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ನಿರ್ಧರಿಸೋದು ಪಕ್ಷ. ಬಿಜೆಪಿಯವರು ದಲಿತರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಆರ್ ಎಸ್ಎಸ್ ಸಂಚಾಲಕ ಮೋಹನ್ ಭಾಗವತ್ 75 ವರ್ಷ ವಯಸ್ಸು  ದಾಟಿದವರು ಯುವಕರಿಗೆ ಅಧಿಕಾರ ಬಿಟ್ಟುಕೊಡಲಿ ಎಂದು ಹೇಳಿದ್ದರು. ಇದು ಮೋದಿಯನ್ನು ಉದ್ದೇಶಿಸಿ ಹೇಳಿರಬಹುದೇ ಎಂದು ಚರ್ಚೆಯಾಗಿತ್ತು. ಇದರ ನಡುವೆ ರಾಜ್ಯ ಬಿಜೆಪಿ ನಾಯಕರು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದರು.

ಇದರ ಬಗ್ಗೆ ಈಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ‘ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ. ಎಪ್ಪತ್ತೈದು ವರ್ಷ ತುಂಬಿರುವ ನರೇಂದ್ರ ಮೋದಿ ಅವರ ಪದಚ್ಯುತಿಯ ಸೂಚನೆಯನ್ನು ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ದಲಿತ ಪ್ರಧಾನಮಂತ್ರಿಯನ್ನು ಮಾಡಲು ಬಿಜೆಪಿಗೆ ಇದೊಂದು ಸದಾವಕಾಶ. ಆ ಪ್ರಯತ್ನ ವಿಜಯೇಂದ್ರ ಅವರಿಂದಲೇ ಶುರುವಾಗಲಿ’ ಎಂದು ಸವಾಲು ಹಾಕಿದ್ದಾರೆ.
ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಪ್ರತಿಕ್ರಿಯಿಸಿದ್ದು ಯಾಕೆ ಪ್ರಧಾನಿ, ಸಿಎಂ ಹುದ್ದೆಗೂ ಜಾತಿ ತಂದಿಡುತ್ತೀರಿ? ಒಂದು ಸಮುದಾಯದ ಅಭಿವೃದ್ಧಿ ಆಗಬೇಕಾದರೆ ಆ ಸಮುದಾಯದವರೇ ನಾಯಕರಾಗಬೇಕೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ