ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬಾರದು, ರಾಹುಲ್ ಗಾಂಧಿ ನೇತೃತ್ವ ಬೇಕು: ಸಿಎಂ ಸಿದ್ದರಾಮಯ್ಯ

Krishnaveni K

ಗುರುವಾರ, 26 ಸೆಪ್ಟಂಬರ್ 2024 (11:05 IST)
ನಿಲಂಬೂರು: ಮುಡಾ ಸಂಕಷ್ಟದ ನಡುವೆ ಕೇರಳ ಪ್ರವಾಸ ಮಾಡಿದ್ದ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲು ಬಿಡಬಾರದು ಎಂದಿದ್ದಾರೆ.

ಬಿಜೆಪಿ ಈ ದೇಶದಲ್ಲಿ ಬೆಳೆಯಬಾರದು. ಅದು ಬೆಂಕಿ ಇಡುವ ಪಕ್ಷ. ಧರ್ಮ, ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಪಕ್ಷ. ಈ ದೇಶದ ರಾಜಕಾರಣದಿಂದ ಬಿಜೆಪಿಯನ್ನು ತೊಲಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಎಲ್ಲರೂ ಅದಕ್ಕಾಗಿ ಪ್ರಯತ್ನ ಮಾಡೋಣ. ಕೆ.ಸಿ.ವೇಣುಗೋಪಾಲ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ , ಸೋನಿಯಾ ಗಾಂಧಿ ಯವರ ನಾಯಕತ್ವದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡೋಣ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡು ಮುಂದುವರೆಯೋಣ ಎಂದರು.

ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಕೂಡ ಇದೆ ವಿಚಾರದಲ್ಲಿ ಬದ್ಧತೆ ಇಟ್ಟುಕೊಂಡಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರನ್ನು ಕಂಡರೆ ಬಿಜೆಪಿ ಗೆ ಆಗುವುದಿಲ್ಲ . ದೇಶದಲ್ಲಿ ಅನೇಕ ಧರ್ಮಗಳು, ಜಾತಿಗಳು, ಭಾಷೆ ಹಾಗೂ ಸಂಸ್ಕೃತಿಗಳು ಇವೆ. ಈ ನೆಲದ ಮಣ್ಣಿನ ಗುಣ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವಂತದ್ದು.   ಕೇರಳ ಜಾತ್ಯಾತೀತ ತತ್ವ, ಸಮಾಜವಾದಿ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮೊದಲಿನಿಂದಲೂ ಕೂಡ ಮುಂಚೂಣಿಯಲ್ಲಿದೆ. ನಾವೆಲ್ಲರೂ ಕೂಡ ಜಾತ್ಯಾತೀತವಾದಿ ಗಳಾಗಬೇಕು. ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ದೇಶದ ಎಲ್ಲಾ ಧರ್ಮಗಳು ಪ್ರೀತಿಯನ್ನು ಸಾರುತ್ತವೆಯೇ ಹೊರತು ಧ್ವೇಷವನ್ನು ಸಾರುವುದಿಲ್ಲ. ಕೇರಳ ಮೊದಲಿನಿಂದಲೂ ಜಾತ್ಯಾತೀತ, ಸಮಾಜವಾದಿ ಹಾಗೂ ಪ್ರಜಾಪ್ರಭುತ್ವ ತತ್ವಗಳಿಗೆ ಬದ್ಧತೆಯಿರುವ ರಾಜ್ಯ . ಇಂಥ ರಾಜ್ಯದಿಂದ ಕೆ ಸಿ.ವೇಣುಗೋಪಾಲ್ ಬಂದಿದ್ದಾರೆ. ಹಾಗಾಗಿಯೇ ಮೊದಲಿನಿಂದಲೂ ಅವರ ರಕ್ತದಲ್ಲಿ ಸಮಾಜವಾದ , ಪ್ರಜಾಪ್ರಭುತ್ವ, ಜಾತ್ಯಾತೀತತೆಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು.

ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಅಸಮಾನತೆಯನ್ನು ಹೋಗಲಾಡಿಸುವವರೆಗೆ ದೇಶದ ಅಭಿವೃದ್ಧಿ ಹಾಗೂ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು  ಬಸವಣ್ಣ, ನಾರಾಯಣಗುರು ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದನೆ ಮಾಡಿದ್ದರು. ಕರ್ನಾಟಕದ ಕಾಂಗ್ರೆಸ್ ಇದನ್ನು ಅನುಸರಿಸುತ್ತಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ