ರೇಣುಕಾ ಯಲ್ಲಮ್ಮದೇವಿ ಸನ್ನಿಧಿಯಲ್ಲಿ ಪತ್ನಿ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ

Sampriya

ಭಾನುವಾರ, 13 ಅಕ್ಟೋಬರ್ 2024 (16:56 IST)
Photo Courtesy X
ಸವದತ್ತಿ: ಶ್ರೀ  ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗಾಗಿ ಯಲ್ಲಮ್ಮ ಸನ್ನಿಧಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ವೇಳೆ ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮತ್ತು ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆಯನ್ನು ತಮ್ಮದೇ ಅಧ್ಯಕ್ಷತೆಯಲ್ಲಿ ನಡೆಸಿದರು.

ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕ್ಷೇತ್ರದ ಶಾಸಕರಾದ ವಿಶ್ವಾಸ್ ವ ವೈದ್ಯ ಮತ್ತು ಜಿಲ್ಲೆಯ ಶಾಸಕರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ನೀಡಿದ ಪ್ರಮುಖ ಸಲಹೆಗಳು:

*ರೇಣುಕಾ ಯಲ್ಲಮ್ಮ ದೇವಿ ಸನ್ನಿದಿಗೆ ಬರುವ ಭಕ್ತರೆಲ್ಲರಿಗೂ ತಾಯಿಯ ದರ್ಶನ ಕಡ್ಡಾಯವಾಗಿ ಸಿಗುವ ವ್ಯವಸ್ಥೆಯನ್ನು ಪ್ರಥಮ ಆಧ್ಯತೆಯಲ್ಲಿ ಒದಗಿಸಬೇಕು.

*ಭಕ್ತಾದಿಗಳ ಆರೋಗ್ಯಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಶೌಚಾಲಯ, ಕುಡಿಯುವ ನೀರು, ವಿದ್ಯುತ್,  ಉಳಿಯಲು ಅಚ್ಚುಕಟ್ಟುತನದ ವ್ಯವಸ್ಥೆಯನ್ನು ಕಲ್ಪಿಸಬೇಕು. ತಿರುಪತಿ ಮಾದರಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಬೇಕು.

*ಸಮರ್ಪಕ ವ್ಯವಸ್ಥೆ ಕಲ್ಪಿಸಿ ದೇವಿಯ ದರ್ಶನದ ಖಾತ್ರಿ ಆದರೆ ಭಕ್ತರು ಮತ್ತು ಪ್ರವಾಸಿಗರ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂದರು.

*ತಾಯಿ ಯಲ್ಲಮ್ಮ ದರ್ಶನಕ್ಕೆ ಬಡವರು, ಶ್ರಮಿಕರು, ತಳ ಸಮುದಾಯದವರು, ಮಹಿಳೆಯರು ಮತ್ತು ದುಡಿಯುವ ವರ್ಗದವರೇ ಹೆಚ್ಚಾಗಿ ಬರುವ ಕ್ಷೇತ್ರ ಇದು.

*ಸೌಕರ್ಯ ಅಚ್ಚುಕಟ್ಟಾಗಿದ್ದರೆ ಕ್ಷೇತ್ರದ ಆದಾಯವೂ ಹೆಚ್ಚಾಗುತ್ತದೆ. ಈ ಆದಾಯದಿಂದ ಭಕ್ತರಿಗೆ ಇನ್ನೂ ಹೆಚ್ಚಿನ ಮೂಲಭೂತ ಸವಲತ್ತು ಒದಗಿಸಬಹುದು.

*ಕ್ಷೇತ್ರ ಆಕರ್ಷಣೀಯವಾಗಿರಬೇಕು.

*ಎತ್ತಿನಗಾಡಿಯಲ್ಲಿ ಅತಿ ಹೆಚ್ಚು ಪ್ರಮಾಣದ ಭಕ್ತರು ಆಗಮಿಸುವುದರಿಂದ ಕಾರು, ಬೈಕುಗಳ ಜೊತೆಗೆ ಎತ್ತಿನಗಾಡಿ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಬೇಕು. ಎತ್ತು, ಹಸುಗಳಿಗೆ ಉತ್ತಮ ಮೇವು-ನೀರು-ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಪೂರಕವಾಗಿ ಕಾರ್ಯಯೋಜನೆ ರೂಪಿಸಬೇಕು.

*ಪ್ರತೀ ವರ್ಷ 1.5 ರಿಂದ 2 ಕೋಟಿ ಭಕ್ತರು ಬರುವುದರಿಂದ ಆರೋಗ್ಯಕರ ದಾಸೋಹ ವ್ಯವಸ್ಥೆ ಮತ್ತು ವೈಜ್ಞಾನಿಕ ಪದ್ಧತಿಯ ಕಸ ವಿಲೇವಾರಿ ವ್ಯವಸ್ಥೆಯನ್ನು ರೂಪಿಸಬೇಕು.

*ಕ್ಷೇತ್ರಕ್ಕೆ ಸೇರಿದ ಜಾಗ, ಜಮೀನನ್ನು ಮೊದಲು ಗುರುತಿಸಿ, ಒತ್ತುವರಿ ಆಗಿದ್ದರೆ ಬಿಡಿಸಿಕೊಳ್ಳಬೇಕು. ಸ್ಥಳದ ಸುತ್ತ ಕಾಂಪೌಂಡ್, ಫೆನ್ಸಿಂಗ್ ಹಾಕಿ ಜಾಗದ ಭದ್ರತೆ ಮಾಡಿಕೊಳ್ಳಬೇಕು.

*ಭಕ್ತರು ಬರುವ ದೇವಸ್ಥಾನದ ಮಾರ್ಗ ಮತ್ತು ಸುತ್ತಲ ಪ್ರದೇಶಗಳಲ್ಲಿ ಹಾಗೂ ಭಕ್ತರು ಉಳಿಯುವ ಜಾಗದಲ್ಲಿ ಬೀದಿ ದೀಪ, ವಿದ್ಯುತ್ ಸೌಲಭ್ಯ ಒದಗಿಸಬೇಕು.

*ರೋಪ್ ವೇ ಸವಲತ್ತು ಕಲ್ಪಿಸುವುದರಿಂದ ಅನುಕೂಲ ಆಗುತ್ತದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಿ ಎನ್ನುವ ಸೂಚನೆಯನ್ನು ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ